

ತಾಳಿಕೋಟೆ: ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಅ.1 ರಂದು ನಡೆಯಲಿದ್ದು, ಎಲ್ಲ ಸಿದ್ಧತೆಗಳನ್ನು ತ್ವರಿತವಾಗಿ ಕೈಗೊಳ್ಳಲಾಗುತ್ತಿದೆ. ಕನ್ನಡ ಅಭಿಮಾನಿಗಳ ತವರು ತಾಳಿಕೋಟೆ ಹಿರಿಮೆಯನ್ನು ಈ ಸಮ್ಮೇಳನ ಹೆಚ್ಚಿಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ತಾಳಿಕೋಟೆ ನೂತನ ತಾಲೂಕು ಕೇಂದ್ರವಾಗಿ ರಚನೆಯಾದ ಬಳಿಕ ಮೊದಲನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿದೆ. ಕನ್ನಡ ಮನಸ್ಸುಗಳನ್ನು ಒಂದೆಡೆ ಸೇರಿಸುವಂತಹ ವೈಭವಯುತ ಸಮ್ಮೇಳನ ನಡೆಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಮನಸ್ಸಿನ ಆಳದಲ್ಲಿ ಕನ್ನಡ ಪ್ರೇಮವನ್ನು ಹೆಚ್ಚಿಸುವಂತಹ ಸಮ್ಮೇಳನ ಮಾಡಲಾಗುವುದು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ರೀತಿಯಲ್ಲಿ ನಡೆಸಲು ಎಲ್ಲ ಕನ್ನಡ ಮನಸ್ಸುಗಳು ಕೈಜೋಡಿಸುತ್ತಿರುವುದು ಸಂತಸ ತಂದಿದೆ ಎಂದರು.
ಸಮ್ಮೇಳನದಲ್ಲಿ ಧ್ವಜಾರೋಹಣ, ಮೆರವಣಿಗೆ, ಮಹಿಳಾ ಗೋಷ್ಠಿ, ಕವಿಗೋಷ್ಠಿ, ಜಾನಪದ ಗೋಷ್ಠಿ ಒಳಗೊಂಡಂತೆ ಇನ್ನಿತರ ಕಾರ್ಯಕ್ರಮಗಳ ಕುರಿತು ಸಲಹೆಗಳನ್ನು ಮುಂದಿನ ಸಭೆಗಳಲ್ಲಿ ಪಡೆದುಕೊಂಡು ನಿರ್ಧರಿಸಲಾಗುತ್ತದೆ. ಕಾವ್ಯ ವಾಚನ ಮಾಡುವವರು ಕಸಾಪ ತಾಲೂಕು ಘಟಕದ ಅಧ್ಯಕ್ಷ ರೇವಣಸಿದ್ದಪ್ಪ ಕೊಪ್ಪದ ಅವರಲ್ಲಿ ಹೆಸರು ನೋಂದಾಯಿಸಬೇಕು. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯಾರನ್ನು ಮಾಡಿದರೆ ಸೂಕ್ತವಾಗುತ್ತದೆ ಎಂಬುದರ ಕುರಿತು ಅಧ್ಯಕ್ಷರಾಗುವವರ ಸಾಹಿತ್ಯಾಭಿರುಚಿ, ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಸೇರಿ ಇನ್ನಿತರ ಮಾಹಿತಿಯನ್ನು ತಾಲೂಕು ಅಧ್ಯಕ್ಷರ ಬಳಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ ಕೊಪ್ಪದ ಮಾತನಾಡಿ, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸಾಹಿತಿಗಳು, ಶಿಕ್ಷಕರು, ಕನ್ನಡಾಭಿಮಾನಿಗಳು, ವಿದ್ಯಾರ್ಥಿಗಳ ಸಹಯೋಗದೊಂದಿಗೆ ಸಮ್ಮೇಳನ ಯಶಸ್ವಿಗೊಳಿಸಲು ಎಲ್ಲರನ್ನು ವಿಸ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಬಸವನಬಾಗೇವಾಡಿ ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ಆರ್.ಬಿ.ದಾನಿ, ಬಿ.ಬಿ.ಬಿರಾದಾರ, ಸಿದ್ದು ಶಿರಸಿ, ಜೈಭೀಮ ಮುತ್ತಗಿ, ಬಿ.ಆರ್.ಪೋಲಿಸ್‌ಪಾಟೀಲ, ಸಂಗನಗೌಡ ಅಸ್ಕಿ, ಗಂಗಾಧರ, ಡಾ.ನಜೀರ ಕೋಳ್ಯಾಳ ಇತರರಿದ್ದರು.