ಅಭ್ಯರ್ಥಿಗಳ ಎದೆಯಲ್ಲಿ ಹೆಚ್ಚಿದ ಢವ ಢವ

TLK-23-2
Published on

ಜಿ.ಪಿ. ಘೋರ್ಪಡೆ
ತಾಳಿಕೋಟೆ: ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ಬಳಿಕ ಕೆಲವು ಹಳ್ಳಿಕಟ್ಟೆಗಳಲ್ಲಿ ನಡೆಯುತ್ತಿರುವ ಲೆಕ್ಕಾಚಾರಗಳ ಜೊತೆಗೆ ಬೆಟ್ಟಿಂಗ್ ದಂಧೆ ಬಲು ಜೋರಾಗಿ ನಡೆಯುತ್ತಿರುವುದು ಕಂಡುಬರುತ್ತಿದೆ.

ಚುನಾವಣೆ ಪೂರ್ವದಲ್ಲಿ ಕೆಲವರು ಮತ ಬೇಟೆಗಾಗಿ ಹಣ ಹೆಂಡದ ಜೊತೆ ಇನ್ನಿತರ ಆಮಿಷಗಳನ್ನು ಒಡ್ಡಿ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನಗಳು ನಡೆದುಹೋಗಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಇನ್ನೂ ಕೆಲವರು ಗುಳೆ ಹೋದಂತಹ ಜನರ ವೋಟಿನ ಮೇಲೆ ಕಣ್ಣಿಟ್ಟು ಬಲೆ ಬಿಸಿ ಅವರನ್ನು ಶತಾಯಗತಾಯ ತಮ್ಮ ತಮ್ಮ ಗ್ರಾಮಗಳಿಗೆ ಕರೆಯಿಸಿ ಮತಚಲಾಯಿಸುವಂತೆ ನೋಡಿಕೊಂಡಿದ್ದರ ಫಲವಾಗಿ ಎಲ್ಲ ಚುನಾವಣೆಗಳಿಗಿಂತಲೂ ಗ್ರಾಪಂ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಹಳ್ಳಿಕಟ್ಟಿಗಳಲ್ಲಿ ನಡೆಯುತ್ತಿರುವ ಚರ್ಚಾಕೂಟಗಳಿಂದ ಸದ್ಯ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಹೆಚ್ಚುತ್ತಿರುವುದಕ್ಕೆ ಕಾರಣವಾಗಿದ್ದು, ಇನ್ನೂ ಕೆಲವರು ಕೈಯಲ್ಲಿ ಹಣವಿಲ್ಲದಿದ್ದರೂ ಸಾಲಮಾಡಿ ಚುನಾವಣೆ ಎದುರಿಸಿದ್ದೇವೆ ದೇವರ ದಯೇ ಈ ಭಾರಿ ಗೆದ್ದು ಬಂದರೆ ಸಾಕಪ್ಪ ಎಂದು ದೇವರ ಮೋರೆ ಹೋಗುತ್ತಿದ್ದಾರೆ.

ತಾಳಿಕೋಟೆ ತಾಲೂಕಿಗೆ ಒಳಪಟ್ಟ 14 ಗ್ರಾಪಂಗಳಿಗೆ 258 ಸ್ಥಾನಗಳಲ್ಲಿ ಈಗಾಗಲೇ 29 ಜನರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇನ್ನೂ 229 ಜನರು ಆಯ್ಕೆಗೊಳ್ಳಬೇಕಿದ್ದು, ಚುನಾವಣೆಯಲ್ಲಿ 661 ಜನರು ಸ್ಪರ್ಧಿಸಿದ್ದರು. ಡಿ.30 ರಂದು ನಡೆಯಲಿರುವ ಮತ ಎಣಿಕೆಯಲ್ಲಿ ಎಲ್ಲರ ಭವಿಷ್ಯ ನಿರ್ಧಾರಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net