ದುರ್ನಾತಕ್ಕೆ ಬೇಸತ್ತ ಬಡಾವಣೆ ಜನ

TLK 7-1
Published on

ಜಿ.ಪಿ. ಘೋರ್ಪಡೆ, ತಾಳಿಕೋಟೆ

ಗ್ರಾಮದ ಜನತೆ ಬಳಕೆ ಮಾಡಿ ಚರಂಡಿಗೆ ಹರಿಬಿಟ್ಟ ನೀರು ಈಗ ಬಡಾವಣೆ ಜನರಿಗೆ ದುರ್ವಾಸನೆ ಜೊತೆಗೆ ರೋಗಕ್ಕೂ ಆಹ್ವಾನ ನೀಡುತ್ತಿದೆ. ತಾಲೂಕಿನ ಕೊಡಗಾನೂರ ಗ್ರಾ.ಪಂ. ವ್ಯಾಪ್ತಿಗೊಳಪಡುವ ಗಡಿಸೋಮನಾಳ ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆಯ ಕೆಂಚಮ್ಮದೇವಿ ದೇವಸ್ಥಾನದ ಮುಂದೆ ಚರಂಡಿ ನೀರು ಹೊಂಡವಾಗಿ ಮಾರ್ಪಟ್ಟಿದೆ. ಇಲ್ಲಿ ವಾಸಿಸುವ ನೂರಾರು ಕುಟುಂಬಗಳು ನರಕಯಾತನೆ ಅನುಭವಿಸುತ್ತಿವೆ. ಚರಂಡಿಗೆ ಹರಿಬಿಟ್ಟಿರುವ ನೀರು ಈ ಬಡಾವಣೆ ಮೂಲಕ ಗ್ರಾಮದ ಖಾಸಗಿ ಮಾಲೀಕರ ಜಮೀನಿನಲ್ಲಿ ಶೇಖರಣೆಯಾಗಿ ಇಂಗುವ ವ್ಯವಸ್ಥೆ ಮೊದಲಿನಿಂದ ಇತ್ತು. ಆದರೀಗ ಖಾಸಗಿ ಜಮೀನಿನ ಮಾಲೀಕರು ಚರಂಡಿ ನೀರು ನಮ್ಮ ಜಮೀನಿನಲ್ಲಿ ತೆಗೆದುಕೊಳ್ಳುವುದಿಲ್ಲ ಎಂದು ಒಡ್ಡು ಕಟ್ಟಿದ್ದರಿಂದ ಚರಂಡಿ ನೀರು ಬಡಾವಣೆಯಲ್ಲಿ ಶೇಖರಣೆಗೊಳ್ಳುತ್ತಿದೆ. ಈ ಬಡಾವಣೆಯಲ್ಲಿ ಕೆಂಚಮ್ಮ ದೇವಸ್ಥಾನವಿದ್ದು, ನಿತ್ಯ ನೂರಾರು ಜನ ದೇವಸ್ಥಾನಕ್ಕೆ ಬರುತ್ತಾರೆ. ಆದರೆ, ಈ ದೇವಸ್ಥಾನದ ಮುಂದೆ ಕೊಳಚೆ ನೀರು ಶೇಖರಣೆಗೊಂಡಿದ್ದರಿಂದ 2 ತಿಂಗಳಿಂದ ಈ ದೇವಸ್ಥಾನ ಬಳಿ ಯಾರೂ ಸುಳಿಯುತ್ತಿಲ್ಲ ಎಂದು ಬಡಾವಣೆ ಜನ ಅಳಲು ತೋಡಿಕೊಂಡಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಈ ಬಡಾವಣೆ ಜನರು ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಈ ಕೊಳಚೆ ನೀರಲ್ಲೇ ನಡೆದುಕೊಂಡು ಮನೆ ಸೇರಿಕೊಳ್ಳಬೇಕಾಗಿದೆ. ಆದರೆ, ಕೊಳಚೆ ನೀರು ತುಳಿಯುವುದರಿಂದ ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವಂತಾಗಿದೆ. ಕೂಡಲೇ ಈ ಕೊಳಚೆ ನೀರು ತೆರವುಗೊಳಿಸಬೇಕು. ಇಲ್ಲದಿದ್ದರೆ ದುನಾರ್ತದಿಂದ ಆಗುವ ಅನಾಹುತಗಳಿಗೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಬಡಾವಣೆ ನಿವಾಸಿಗಳಾದ ಶಿವಪ್ಪ ಮಾದರ, ಗುರಪ್ಪ ಮಾದರ, ಬಸಪ್ಪ ಮಾದರ, ಚನ್ನಪ್ಪ ಮಾದರ, ಜೆಟ್ಟೆಪ್ಪ ಮಾದರ, ಮಲ್ಲಪ್ಪ ಮಾದರ, ಗುರಪ್ಪ ಮಾದರ, ಸಿದ್ದಪ್ಪ ಮಾದರ, ಯಲಗೂರಪ್ಪ ಮಾದರ, ಸತ್ಯವ್ವ ಮಾದರ, ಸಂಗಪ್ಪ ಮಾದರ, ಶಾಂತಮ್ಮ ಮಾದರ, ದುರ್ಗಪ್ಪ ಮಾದರ ಎಚ್ಚರಿಸಿದ್ದಾರೆ.

ಹೆಚ್ಚಿದ ಸೊಳ್ಳೆ ಕಾಟ

ರಾತ್ರಿಯಾಗುವುದರೊಳಗೆ ಮನೆ ಬಾಗಿಲು, ಕಿಟಕಿಗಳನ್ನು ಮುಚ್ಚಿಕೊಳುವುದು ಈ ಬಡಾವಣೆ ಜನರಿಗೆ ಅನಿವಾರ್ಯವಾಗಿದೆ. ಸಂಜೆಯಾಗುತ್ತಿದ್ದಂತೆ ದುರ್ನಾತದ ಜೊತೆಗೆ ಸೊಳ್ಳೆಗಳ ಕಾಟವು ಜನರ ನಿದ್ದೆಗೆಡಿಸಿದೆ.

ಮನವಿಗೆ ಸ್ಪಂದಿಸದ ಅಧಿಕಾರಿಗಳು

ದುರ್ನಾತ ಹಾಗೂ ಸೊಳ್ಳೆಗಳ ಕಾಟ ನಿವಾರಿಸುವಂತೆ ತಾಲೂಕಾಡಳಿತ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಪಿಡಿಒಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸೌಜನ್ಯಕ್ಕಾದರೂ ಬಡಾವಣೆಗೆ ಅಧಿಕಾರಿಗಳು ಭೇಟಿ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮದಲ್ಲಿ ಕೊಳಚೆ ನೀರು ಸಂಗ್ರಹದಿಂದ ಜನರಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಮಸ್ಯೆ ಪರಿಹಸಿರಿಸಬೇಕು. ಇಲ್ಲದಿದ್ದರೆ ತಹಸೀಲ್ದಾರ್ ಕಚೇರಿ ಎದುರು ಕುಟುಂಬ ಸಮೇತ ಧರಣಿ ಕುಳಿತುಕೊಳ್ಳುತ್ತೇವೆ.ಶಿವಪ್ಪ ಹೊಕ್ರಾಣಿ, ಬಡಾವಣೆ ನಿವಾಸಿ.ಗ್ರಾಮಕ್ಕೆ ಭೇಟಿ ನೀಡಿ, ಕೊಳಚೆ ನೀರು ಬೇರೆಡೆ ಹರಿದುಹೋಗುವ ವ್ಯವಸ್ಥೆ ಮಾಡುತ್ತೇನೆ. ಗ್ರಾಮದ ನೈರ್ಮಲ್ಯಕರಣಕ್ಕೆ ಕಿಯಾಯೋಜನೆ ಸಿದ್ದಪಡಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು.ಪ್ರಭು ಜೇವೂರ, ಪಿಡಿಒ, ಕೊಡಗಾನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net