

ತಾಳಿಕೋಟೆ: ಪಟ್ಟಣ ಸಮೀಪ ಡೋಣಿ ನದಿಯಲ್ಲಿ ಬುಧವಾರ ವ್ಯಕ್ತಿಯೊಬ್ಬ ಕೊಚ್ಚಿಕೊಂಡು ಹೋಗಿದ್ದಾನೆ.
ಇಬ್ರಾಹಿಂ ಬೇಪಾರಿ(55) ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದು, ಪತ್ತೆಗಾಗಿ ಕಾರ್ಯಾಚರಣೆ ನಡೆದಿದೆ. ಮೂರು ದಿನಗಳಿಂದ ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಅಪಾರ ಮಳೆಯಿಂದ ಡೋಣಿ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾವೃತಗೊಂಡಿರುವ ಪಟ್ಟಣದ ಬಳಿಯ ಕೆಳಮಟ್ಟದ ಸೇತುವೆ ಮೇಲಿಂದ ನದಿ ದಾಟಲು ಮುಂದಾದ ಇಬ್ರಾಹಿಂ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಅವರು ನೀರಿನಲ್ಲಿ ಹರಿದುಕೊಂಡು ಹೋಗುತ್ತಿರುವ ದೃಶ್ಯವನ್ನು ನದಿ ದಡದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ ಇಬ್ರಾಹಿಂ ಬೇಪಾರಿ ಪತ್ತೆ ಕಾರ್ಯದಲ್ಲಿ ಪೊಲೀಸ್ ಅಧಿಕಾರಿ ವಿನೋದ ದೊಡಮನಿ ನೇತೃತ್ವದ ಸಿಬ್ಬಂದಿ ಹಾಗೂ ಅಗ್ನಿ ಶಾಮಕದಳದ ಅಧಿಕಾರಿ ಜೆ.ಬಿ.ಶೇವಳಂಕರ ನೇತೃತ್ವದ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ.
ಕತ್ತಲಾಗುತ್ತಿದ್ದಂತೆ ಕಾರ್ಯಾಚರಣೆ ಸ್ಥಗಿತಗೊಳಿಸಿ ಗುರುವಾರ ಮುಂದುವರಿಸಲು ಅಧಿಕಾರಿಗಳು ನಿರ್ಧರಿಸಿದರು. ಸ್ಥಳಕ್ಕೆ ತಾಳಿಕೋಟೆ ತಹಸೀಲ್ದಾರ್ ಅನೀಲಕುಮಾರ ಢವಳಗಿ, ಸಿಪಿಐ ಆನಂದ ವಾಘ್ಮೋಡೆ ಭೇಟಿ ನೀಡಿ ಪರಿಶೀಲಿಸಿದರು. ಸದ್ಯ ನದಿ ದಡದತ್ತ ಯಾರು ಹೋಗದಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇಬ್ಬರು ಯುವಕರ ರಕ್ಷಣೆ
ಇಬ್ರಾಹಿಂ ಬೇಪಾರಿ ನೀರಿನಲ್ಲಿ ಕೊಚ್ಚಿ ಹೋಗುವ ಮುಂಚೆ ಇಬ್ಬರು ಯುವಕರು ಬೈಕ್‌ನೊಂದಿಗೆ ನದಿ ದಾಟಲು ಹೋದಾಗ ನೀರಿನ ರಭಸಕ್ಕೆ ಬೈಕ್ ಸಮೇತವಾಗಿ ನದಿಯಲ್ಲಿ ಬಿದ್ದ ಘಟನೆ ಕೂಡ ನಡೆದಿದ್ದು, ತಡೆಗೋಡೆ ಹಿಡಿದುಕೊಂಡು ನಿಂತಿದ್ದರಿಂದ ಅವರನ್ನು ಬೈಕ್ ಸಮೇತ ರಕ್ಷಿಸಲಾಗಿದೆ.