

ವೇಣುವಿನೋದ್ ಕೆ.ಎಸ್. ಮಂಗಳೂರು
ತಾಲಿಬಾನ್‌ಗಳಿಗೆ ಅಫಘಾನಿಸ್ತಾನದಲ್ಲಿ ಆಡಳಿತ ಮುಂದುವರಿಸಿಕೊಂಡು ಹೋಗುವುದು ಸಾಧ್ಯವಿಲ್ಲ. ಈಗಿನ ಪೀಳಿಗೆಯವರು ಪ್ರಜ್ಞಾವಂತರಾಗಿದ್ದಾರೆ, ಹೀಗೆಯೇ ಮುಂದುವರಿದರೆ ಅಲ್ಲಿ ಕ್ರಾಂತಿ ನಡೆದರೂ ಅಚ್ಚರಿಯಿಲ್ಲ. ಅಘ್ಘಾನಿಸ್ತಾನದವರ ನಾಗರಿಕರ ಸ್ವಾತಂತ್ರೃ ಹೋರಾಟಕ್ಕೆ ಭಾರತ ಸಹಿತ ಎಲ್ಲ ರಾಷ್ಟ್ರಗಳು ನೆರವು ನೀಡಬೇಕಾದ ಅವಶ್ಯಕತೆ ಇದೆ. ತಾಲಿಬಾನ್ ಅಫ್ಘನ್‌ಗಷ್ಟೇ ಸೀಮಿತವಲ್ಲ. ಅದರಿಂದ ನಮಗೇನೂ ಆಗದು ಎಂದು ಇತರ ದೇಶಗಳು ಕಣ್ಮುಚ್ಚಿ ಕೂರುವಂತಿಲ್ಲ. ಭಾರತದ ಕಾಶ್ಮೀರದ ಮೇಲೂ ಅವರ ಕಣ್ಣಿರುವುದು ಸ್ಪಷ್ಟ.
ಅಫ್ಘಾನಿಸ್ತಾನದ ಬಾಲ್ಖ್ ಯುನಿವರ್ಸಿಟಿಯ ರಾಜಕೀಯ ಶಾಸ್ತ್ರಗಳ ಉಪನ್ಯಾಸಕರಾಗಿದ್ದು, ಪ್ರಸ್ತುತ ಪಿಎಚ್‌ಡಿ ಅಧ್ಯಯನಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯದಲ್ಲಿರುವ ಫರ‌್ಹಾದ್ ಸುಲ್ತಾನಿ ಅವರ ಮಾತುಗಳಿವು.
2011ರಿಂದೀಚೆಗೆ ಭಾರತಕ್ಕೆ ಬಂದುಹೋಗುತ್ತ ಇದ್ದವರು ಫರ‌್ಹಾದ್. ಪಬ್ಲಿಕ್ ಅಡ್ಮಿನಿಸ್ಟ್ರೇಶನ್ ವಿಷಯದಲ್ಲಿ ಚಂಡೀಗಢ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, 2019ರಿಂದೀಚೆಗೆ ಮಂಗಳೂರು ವಿವಿಯಲ್ಲಿನ ರಾಜಕೀಯ ಶಾಸ್ತ್ರ ವಿಭಾಗದಲ್ಲಿ ಪಿಎಚ್‌ಡಿ ಅಧ್ಯಯನ ನಿರತರಾಗಿದ್ದಾರೆ. ತಾಯ್ನಡಿನ ಬೆಳವಣಿಗೆಗಳು ಹಾಗೂ ಭಾರತದ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ.
ಕಾಶ್ಮೀರ ಮರೆಯದಿರಿ: ಭಾರತ ಸದ್ಯ 370ನೇ ವಿಧಿ ರದ್ದು ಮಾಡಿ ಜನರಲ್ಲಿ ವಿಶ್ವಾಸ ಮೂಡಿಸಿರಬಹುದು. ಆದರೆ ತಾಲಿಬಾನಿಗಳು ಅಘ್ಘಾನಿಸ್ತಾನದಲ್ಲಿ ಆಡಳಿತ ಒಂದು ಹಂತಕ್ಕೆ ಬರುತ್ತಿದ್ದಂತೆಯೇ ಕಾಶ್ಮೀರಕ್ಕೆ ನುಸುಳಲು ಯತ್ನಿಸಬಹುದು. ತಾಲಿಬಾನ್ ಜತೆ ಭಾರತ ಮಾತುಕತೆ ನಡೆಸಿದರೂ ದೀರ್ಘಕಾಲದಲ್ಲಿ ಅದು ಮಾತು ಉಳಿಸಿಕೊಳ್ಳುವ ಸಾಧ್ಯತೆಗಳಿಲ್ಲ. ಪಾಕಿಸ್ತಾನದ ಆಡಳಿತ ಅವರಿಗೆ ಪೂರ್ತಿ ಸಹಕಾರ ನೀಡುತ್ತಲೇ ಬಂದಿದೆ. ಇನ್ನು ಪಾಕಿಸ್ತಾನದಷ್ಟೇ ಚೀನಾ ಕೂಡ ತಾಲಿಬಾನ್‌ಗಳಿಗೆ ನೆರವು ನೀಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಇದನ್ನು ಅಹ್ಮದ್ ರಶೀದ್ ಎಂಬ ಪತ್ರಕರ್ತ, ಲೇಖಕ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.
ತಾಲಿಬಾನ್‌ಗಳು ಬದಲಾಗಲಾರರು: ತಾಲಿಬಾನಿಗಳು ಯಾರಿಗೂ ತೊಂದರೆ ಮಾಡುವುದಿಲ್ಲ ಎಂದು ಹೇಳಿರಬಹುದು, ಆದರೆ ಅವರು ಈಗಾಗಲೇ ತಮ್ಮ ವಿರುದ್ಧ ಮಾತನಾಡಿದವರನ್ನು ಹತ್ಯೆ ಮಾಡಲು, ಅವರನ್ನು ದಮನಿಸುವುದಕ್ಕೆ ಶುರು ಮಾಡಿದ್ದಾರೆ. ಅವರು ಪಶ್ತೂನ್ ಸೂತ್ರಗಳನ್ನಷ್ಟೇ ನಂಬುವವರು. ಬೇರೆ ಯಾವುದೇ ಜಾತ್ಯತೀತ ತತ್ವಗಳ ಮೇಲೆ ನಂಬಿಕೆ ಇಲ್ಲ. ಅವರ ದೃಷ್ಟಿಕೋನವೇ ಬಹಳ ಸಂಕುಚಿತವಾಗಿರುವುದು. ಅಘ್ಘಾನಿಸ್ತಾನಕ್ಕೆ ಉತ್ತಮ ಸಂವಿಧಾನವಿತ್ತು, ಆದರೆ ಇನ್ನು ಮುಂದೆ ಅದನ್ನು ತಾಲಿಬಾನ್ ಅನುಸರಿಸಲಾರದು. ಅವರು ಜನರಿಗೆ ಸಮಾನ ಹಕ್ಕು ನೀಡುವುದಕ್ಕೆ ಇಷ್ಟಪಡುವುದಿಲ್ಲ. ಹಾಗಾಗಿ ತಮ್ಮದೇ ಕಾನೂನು ರೂಪಿಸಬಹುದು.
ತಾಲಿಬಾನಿಗಳ ವಿರುದ್ಧ ಕ್ರಾಂತಿ ಶತಸಿದ್ಧ: ಅಘ್ಘಾನಿಸ್ತಾನ ಈಗ ಬದಲಾಗಿದೆ, ಹೊಸ ಪೀಳಿಗೆ ತಾಲಿಬಾನಿಗಳನ್ನು ಇಷ್ಟಪಡುವುದಿಲ್ಲ. ಈಗಾಗಲೇ ಪ್ರತಿಭಟನೆಗಳು ಶುರುವಾಗಿವೆ. ಜನಸಾಮಾನ್ಯರು ಈಗ ಹೆದರಿದಂತೆ ಕಾಣಬಹುದು. ಆದರೆ ಇದು ಹೆಚ್ಚು ಸಮಯ ಮುಂದುವರಿಯದು. ಸಾಮಾಜಿಕ ಜಾಲತಾಣಗಳ ಮೂಲಕ ಮುಂದಿನ ಹೋರಾಟದ ರೂಪುರೇಷೆಗಳು ಸಿದ್ಧವಾಗಬಹುದು. ಅಫ್ಘನ್ ಸರ್ಕಾರದ ಉಪಾಧ್ಯಕ್ಷ ಅಮ್ರುಲ್ಲ ಸಾಲೇಹ್ ಈಗಾಗಲೇ ತಾವೇ ಅಫ್ಘನ್‌ನ ಪ್ರಭಾರ ಅಧ್ಯಕ್ಷ ಎಂದು ಘೋಷಿಸಿದ್ದಾರೆ. ದೇಶದ 34 ಪ್ರಾಂತ್ಯಗಳ ಪೈಕಿ ಪಂಜ್‌ಶೀರ್ ಮಾತ್ರ ಇನ್ನೂ ತಾಲಿಬಾನಿಗಳಿಗೆ ಸಿಕ್ಕಿಲ್ಲ. ಹಿಂದೆಯೂ ಅದು ಸ್ವತಂತ್ರವಾಗಿತ್ತು. ಅದು ತಾಲಿಬಾನ್ ವಿರುದ್ಧ ಹೋರಾಟದ ನೆಲೆಯೂ ಆಗಿದೆ. ಅಲ್ಲಿಂದಲೇ ನಾರ್ದರ್ನ್ ಅಲಯನ್ಸ್ ಹೆಸರಲ್ಲಿ ಇನ್ನೊಂದು ಹೋರಾಟ ಆರಂಭವಾಗುವುದು ನಿಶ್ಚಿತ.
ಕುಟುಂಬದ ಬಗ್ಗೆ ಭೀತಿ: ಫರ‌್ಹಾದ್ ಸುಲ್ತಾನಿ ಅವರ ಪತ್ನಿ, ಇಬ್ಬರು ಮಕ್ಕಳು ಅಘ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಫರ‌್ಹಾದ್ ಬಾಲ್ಖ್ ವಿವಿಯಲ್ಲಿರುವಾಗಲೇ ತಾಲಿಬಾನಿಗಳ ವಿರುದ್ಧ ಲೇಖನಗಳನ್ನು ಬರೆಯುತ್ತಿದ್ದವರು, ಹಾಗಾಗಿ ಅವರ ಮೇಲೆ ಕಣ್ಣಿದೆ. ಸದ್ಯಕ್ಕಂತೂ ಅಲ್ಲಿಗೆ ಮರಳುವ ಹಾಗಿಲ್ಲ. ಮಕ್ಕಳು, ಪತ್ನಿಯ ಬಗ್ಗೆ ಅವರು ಚಿಂತೆಯಲ್ಲಿದ್ದಾರೆ.
ಭಾರತ ನಮಗೆ ಎರಡನೇ ಮನೆ: ಅಘ್ಘಾನಿಸ್ತಾನ ಹಾಗೂ ಭಾರತದ ನಡುವೆ ಅವಿನಾಭಾವ ಸಂಬಂಧ ಶತಮಾನಗಳಿಂದಲೇ ಇದೆ, ಭಾರತ ನಮಗೆ ಎರಡನೇ ಮನೆ ಇದ್ದಂತೆ. ನಾನು ಯುರೋಪ್‌ನಲ್ಲಿ ಅಧ್ಯಯನಕ್ಕೆ ಹೋಗಿದ್ದೆ. ಅಲ್ಲಿ ನಮಗೆ ಸರಿ ಹೋಗುವುದಿಲ್ಲ. ಇಲ್ಲಿ ಯಾವುದೇ ತೊಂದರೆ ಇಲ್ಲ. ಹಾಗಾಗಿ ಅನೇಕ ಅಫ್ಘನ್ನರು ಶಿಕ್ಷಣ, ವ್ಯಾಪಾರಕ್ಕಾಗಿ ಭಾರತಕ್ಕೆ ಬರುತ್ತಾರೆ.
ಹೋರಾಟ ರೂಪಿಸಬೇಕು: ಭಾರತದಲ್ಲಿರುವ ಅಫ್ಘನರು ಒಟ್ಟಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಹೋರಾಟ ರೂಪಿಸಬೇಕು. ಜಗತ್ತಿಗೆ ಯಾವ ರೀತಿ ತಾಲಿಬಾನ್ ವಂಚನೆ ಎಸಗುತ್ತಿದೆ, ದ್ರೋಹದಲ್ಲಿ ತೊಡಗಿದೆ ಎನ್ನುವುದನ್ನು ನಾವು ಬಯಲು ಮಾಡಬೇಕು, ಈ ಬಗ್ಗೆ ಹೋರಾಟ ನಾನೂ ಮುಂದುವರಿಸುವೆ.