ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

gokarna
Published on

ಗೋಕರ್ಣ: ಹಿರೇಗುತ್ತಿಯ ವಿಘ್ನರಾಜ ಫ್ರೆಂಡ್ಸ್ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಯೋಜಿಸಿದ್ದ ರ‌್ಯಾಂಕ್ ವಿಜೇತ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಯಮಿ ಕೃಷ್ಣ ಮುಕುಂದ ನಾಯಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಕ್ರೀಡೆ ಮತ್ತು ಪ್ರತಿಭೆ ವಿದ್ಯಾರ್ಥಿಗಳಲ್ಲಿ ಸಮ್ಮಿಳಿತವಾಗಿರಬೇಕಾದ ಎರಡು ಅಮೂಲ್ಯ ಗುಣಶೀಲಗಳಾಗಿವೆ. ಸಂಘಟಕರು ಇವೆರಡನ್ನೂ ಗುರುತಿಸಿ ಗೌರವಿಸುತ್ತಿರುವುದು ಸಮಾಜಕ್ಕೊಂದು ಮಾದರಿ ಎಂದರು.

ಶ್ರೀ ಮಹಾಬಲೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಮು ಕೆಂಚನ್, ಹಿರಿಯ ಸಾಮಾಜಿಕ ಕಾರ್ಯಕರ್ತ ನೀಲಪ್ಪ ಗೌಡ, ಹರೀಶ ಬಾಲಚಂದ್ರ ನಾಯಕ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಉದ್ದಂಡ ಬಿ. ಗಾಂವಕರ ಮಾತನಾಡಿ, ರಾಜ್ಯಕ್ಕೆ 10ನೇ ರ‌್ಯಾಂಕ್‌ಗಳಿಸಿದ ಮತ್ತು ಶೇ. 90ಕ್ಕೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿರುವ ಹಿರೇಗುತ್ತಿ ಊರು ಗ್ರಾಮಾಂತರಕ್ಕೆ ತನ್ನದೇ ಆದರ್ಶವನ್ನು ನೀಡಿರುವುದು ಹೆಮ್ಮೆಯಾಗಿದೆ ಎಂದರು.

ಬೊಮ್ಮಯ್ಯ ಹಳ್ಳೇರ ಟ್ರೋಫಿ ಅನಾವರಣಗೊಳಿಸಿದರು. ಗ್ರಾಪಂ ಸದಸ್ಯ ರಮಾಕಾಂತ ಹರಿಕಂತ್ರ ಉಪಸ್ಥಿತರಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ 10ನೆ ರ‌್ಯಾಂಕ್ ಪಡೆದ ಶ್ರೀನಾಗ ವೆಂಕಟ್ರಮಣ ನಾಯಕ ಮತ್ತು ಸುರೇಂದ್ರ ಸಾಯಿನಾಥ ಭಂಡಾರಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net