ಪ್ರತಿಭಾವಂತರು ಹೆತ್ತವರು, ಸಮಾಜಕ್ಕೆ ಕೀರ್ತಿ ತನ್ನಿ

IMG-20240708-WA0049
ತಿ.ನರಸೀಪುರ ತಾಲೂಕು ಹೊಸೂರುಹುಂಡಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ವಿದ್ಯಾರ್ಥಿ ಪ್ರೋತ್ಸಾಹಕರ ವೇದಿಕೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಗಣ್ಯರು ಸನ್ಮಾನಿಸಿದರು. ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಡಾ.ಸಿದ್ದಲಿಂಗ ಶಿವಾಚಾರ್ಯ, ಶ್ರೀ ರಾಜಶೇಖರ ಸ್ವಾಮೀಜಿ, ಸಿದ್ದಲಿಂಗಸ್ವಾಮಿ, ಸುಗಂಧರಾಜು ಇತರರಿದ್ದರು.
Published on

ತಿ.ನರಸೀಪುರ: ಯುವ ಜನರು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಪ್ರತಿಭಾ ಪುರಸ್ಕಾರ ಪಡೆದವಲ್ಲರೂ ಉನ್ನತ ಧ್ಯೇಯ, ಗುರಿ, ಸಾಧನೆಯ ಮೂಲಕ ಹೆತ್ತವರಿಗೆ, ವಿದ್ಯೆ ಕಲಿಸಿದ ಗುರುಗಳಿಗೆ ಹಾಗೂ ಸಮಾಜಕ್ಕೆ ಕೀರ್ತಿ ತರುವಂತಹವರಾಗಬೇಕು ಎಂದು ದೇವನೂರು ಗುರುಮಲ್ಲೇಶ್ವರ ಮಹಾಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ವೀರಶೈವ ಲಿಂಗಾಯತ ವಿದ್ಯಾರ್ಥಿ ಪ್ರೋತ್ಸಾಹಕರ ವೇದಿಕೆ ವತಿಯಿಂದ ತಾಲೂಕಿನ ಹೊಸೂರುಹುಂಡಿ ಗುರುಮಲ್ಲೇಶ್ವರ ಭಿಕ್ಷದ ಮಠದ ಆವರಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ದಾಸೋಹ ಚಕ್ರವರ್ತಿ ಶ್ರೀ ಗುರುಮಲ್ಲೇಶ್ವರ ಸಂಸ್ಮರಣೋತ್ಸವ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಬಸವಣ್ಣನವರು 12ನೇ ಶತಮಾನದಲ್ಲೇ ಪ್ರಜಾಪ್ರಭುತ್ವದ ಪರಿಕಲ್ಪನೆಯ ಬೀಜ ಬಿತ್ತಿದವರು. ಬಸವಣ್ಣ ಕಾರ್ಯ ಮಾಡಿ ಸಾಧಿಸಿ ತೋರಿದವರು. ಮಹಿಳೆಯರಿಗೂ ಸಮಾನ ಸ್ಥಾನಮಾನದ ಮೂಲಕ ಆಗಲೇ ಬದಲಾವಣೆಗೆ ಮುನ್ನುಡಿ ಬರೆದವರು. ಬಸವಣ್ಣ ಅವರು ಹಾಕಿಕೊಟ್ಟ ಹಾದಿಯಲ್ಲೇ ಪ್ರಜಾಪ್ರಭುತ್ವ ರಚನೆಯಾಗಿದೆ ಎಂದು ತಿಳಿಸಿದರು.

ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೊತ್ಸಾಹಿಸಿದರೆ ಉಳಿದ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗುತ್ತದೆ. ಇದರಿಂದ ಕಷ್ಟ ಪಟ್ಟು ಓದುವ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ ಎಂದು ಹೇಳಿದರು.

ಸಾಧನೆಯ ಹಾದಿ ಸುಗಮವಲ್ಲ, ಛಲವಿದ್ದವರು ಮಾತ್ರ ಆ ಹಾದಿಯಲ್ಲಿ ಸಾಗಲು ಸಾಧ್ಯ. ನಮ್ಮ ಕ್ರಿಯೆಗಳಿಗೆ ಪೂರಕವಾಗಿ ಪ್ರತಿಕ್ರಿಯೆ ಇರುತ್ತದೆ. ಅದೇ ರೀತಿ ನಾವು ಅಪೇಕ್ಷೆ ಪಟ್ಟಂತ ಫಲಿತಾಂಶವನ್ನು ಪಡೆಯಲು ಅತಿ ವೇಗವಾಗಿ ಸಾಧನೆಯ ಹಾದಿಯಲ್ಲಿ ಸಾಗಬೇಕಾಗಿದೆ. ಪ್ರತಿಭೆ ಎಲ್ಲರಲ್ಲೂ ಇದೆ. ಆದರೆ ಆಗಿನ ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಅನಿವಾರ್ಯ. ಇವೆರಡರ ನಡುವೆ ಸಾಮಾಜಿಕ ಜವಾಬ್ದಾರಿಯ ಜತೆಗೆ ಹೊಂದಾಣಿಕೆ ಮಾಡಿಕೊಂಡು ಹೋದರೆ ಮಾತ್ರ ಯಶಸ್ಸು ನಿಶ್ಚಿತ ಎಂದು ತಿಳಿಸಿದರು.

ಹಲವಾರ-ಮುಡುಕನಪುರ ಶ್ರೀ ಮಠದ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ಮತ್ತು ನೈತಿಕ ಮೌಲ್ಯ ಇರಬೇಕು. ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಬಲ್ಲದು. ಅದರ ಜತೆಗೆ ಜೀವನದ ಸವಾಲನ್ನು ಎದುರಿಸುವ ಶಕ್ತಿ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸಾಧನೆಯ ಮೆಟ್ಟಿಲನ್ನು ಏರುವ ತುಡಿತ ನಮ್ಮಲ್ಲಿರಬೇಕು. ನಮ್ಮ ಸಾಧನೆ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬೇಕು ಎಂದು ಹೇಳಿದರು.

ಚಿದರವಳ್ಳಿ ಪಾರಮಾರ್ಥಿಕ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದು ಹಾಗೂ ಅವರು ಇನ್ನಷ್ಟು ಸಾಧನೆ ಮಾಡುವಂತೆ ಪ್ರೋತ್ಸಾಹಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿರಬೇಕು. ಪರಿಶ್ರಮ, ಶ್ರದ್ಧೆ ಮತ್ತು ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವ ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಬೇರೆ ಯಾರಿಂದಲೋ ನಾವು ಉದ್ದಾರವಾಗುವುದಿಲ್ಲ. ನಮ್ಮ ಉದ್ದಾರಕ್ಕೆ ನಾವೇ ಶ್ರಮಿಸಬೇಕು. ನಮ್ಮೊಳಗಿನ ಮಿತ್ರನನ್ನು ಪೋಷಿಸಿ, ನಮ್ಮೊಳಗಿನ ಶತ್ರುವನ್ನು ಮಣಿಸಬೇಕು. ಪ್ರಯತ್ನವೆಂಬುದು ನಿರಂತರವಾಗಿರಲಿ ಎಂದು ಕಿವಿಮಾತು ಹೇಳಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶ್ರೀ ಮದ್ವಾಟಾಳು ಸೂರ್ಯ ಸಿಂಹಾಸನ ಮಠದ ಪೀಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಹೊಸೂರುಹುಂಡಿ ಗ್ರಾಮದ ಶ್ರೀ ಗುರುಮಲ್ಲೇಶ್ವರ ಭಿಕ್ಷದ ಮಠ ರಾಜಶೇಖರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಗುರುಮೂರ್ತಿ, ಕಾವೇರಿಪುರ ಮಲ್ಲಣ್ಣ, ನಿಲಸೋಗೆ ನಂಜುಂಡಸ್ವಾಮಿ, ಕೆಇಬಿ ಸಿದ್ದಲಿಂಗಸ್ವಾಮಿ, ಶಂಭುದೇವನಪುರ ಸುಗಂಧರಾಜು, ಎಂ.ಆರ್.ಪ್ರಕಾಶ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಮಲ್ಲಣ್ಣ, ಸೇತುವೆ ಮಠದ ಸಹಜಾನಂದ ಸ್ವಾಮೀಜಿ, ಬೆನಕನಹಳ್ಳಿ ಮಠದ ಮಹದೇವ ಸ್ವಾಮೀಜಿ, ಬಿಲಿಗೆರೆಹುಂಡಿ ಗುರುಸ್ವಾಮಿ, ನಿಲಸೋಗೆ ಮಲ್ಲಪ್ಪಸ್ವಾಮಿ, ಕೊತ್ತೆಗಾಲ ನಾಗಪ್ಪ ಸ್ವಾಮಿ, ವಕೀಲ ಜ್ಞಾನೇಂದ್ರಮೂರ್ತಿ, ಪೂಜಿತ್ ಮೆಡಿಕಲ್ ಕುಮಾರ್, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಪುರಸಭಾ ಸದಸ್ಯೆ ರೂಪಾ ಪರಮೇಶ್, ಸಮಾಜ ಸೇವಕ ರತ್ನ ಶೇಖರ್, ಅಂಗಡಿ ನಾಗೇಶ್, ತೋಂಟೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net