

ಬಾದಾಮಿ: ಮಕ್ಕಳು ದೇಶದ ಆಸ್ತಿ. ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಅಭ್ಯಾಸ ಮಾಡಿ ತಂದೆ ತಾಯಿ, ಸಮಾಜ ಹಾಗೂ ದೇಶದ ಕೀರ್ತಿ ಹೆಚ್ಚಿಸಬೇಕೆಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಕಿವಿ ಮಾತು ಹೇಳಿದರು.
ಪಟ್ಟಣದ ರೇಣುಕಾ ಕೈಗಾರಿಕಾ ತರಬೇತಿ ಕಾಲೇಜಿನಲ್ಲಿ ಭಾವಸಾರ ಕ್ಷತ್ರೀಯ ಸಮಾಜ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಪ್ರಜೆಗಳಾಗಿ ರೂಪಿಸಬೇಕಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಎಲ್ಲ ಮಕ್ಕಳು ಹಿರಿಯರ ಮಾರ್ಗದರ್ಶನದಲ್ಲಿ, ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ಪಡೆದು ಅತ್ಯುತ್ತಮ ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.
ನಿಕಟಪೂರ್ವ ಕಸಾಪ ತಾಲೂಕು ಅಧ್ಯಕ್ಷ ರವಿ ಕಂಗಳ ಉಪನ್ಯಾಸ ನೀಡಿದರು. ಮನೋಹರ ಹಂಚಾಟೆ, ಶಿವುಕುಮಾರ ಹಿರೇಮಠ, ವಿನಾಯಕ ವೈಕುಂಠೆ, ಸಚಿನ್ ಬಾಸುತ್ಕರ, ವಿಜಯಕುಮಾರ ವೈಕುಂಠೆ, ಶ್ರೀಪಾದ ಲಾಂಡೆ ಉಪಸ್ಥಿತರಿದ್ದರು.