ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರತನ್ನಿ

3-06
Published on

ಚಿತ್ರದುರ್ಗ: ಬಾಲಮಂದಿರದಲ್ಲಿರುವ ಮಕ್ಕಳ ಪ್ರತಿಭೆ ಗುರುತಿಸಿ, ಅದಕ್ಕೆ ಅನುಗುಣವಾಗಿ ಉತ್ತಮ ತರಬೇತಿ ನೀಡಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಸೂಚಿಸಿದರು.

ನಗರದ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಬಾಲ ಮಂದಿರಕ್ಕೆ ಶನಿವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ ವೇಳೆ ಮಾತನಾಡಿದರು.

ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ, ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು. ಅದಕ್ಕೆ ಅನುಗುಣವಾಗಿ ಉತ್ತಮ ತರಬೇತಿ ನೀಡಬೇಕು ಎಂದರು.

ನಿತ್ಯ ಕೊಡುವ ಊಟ, ಉಪಹಾರ, ಮೆನು ಚಾರ್ಟ್, ದಾಸ್ತಾನು ಕೊಠಡಿ, ಆಹಾರ ಸಾಮಾಗ್ರಿಗಳು, ಶಿಕ್ಷಣ ವ್ಯವಸ್ಥೆ ಸೇರಿ ಸರ್ಕಾರ ನೀಡುವ ಸೌಲಭ್ಯಗಳ ಕುರಿತು ಪರಿಶೀಲಿಸಿದರು.

ಆಹಾರ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗಬಾರದು. ಗ್ರಂಥಾಲಯಕ್ಕೆ ಹೆಚ್ಚಿನ ಪುಸ್ತಕಗಳನ್ನು ಪಡೆಯಬೇಕು. ಸಂಗೀತ ಉಪಕರಣಗಳು, ಹೊಲಿಗೆ ಯಂತ್ರ ಪೂರೈಕೆ ಸೇರಿ ವಿವಿಧ ಸೌಲಭ್ಯಗಳ ಖರೀದಿಗೆ ಅನುದಾನ ಬಿಡುಗಡೆಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

ಶೈಕ್ಷಣಿಕ ಪ್ರವಾಸ ತೆರಳಲು ಅವಕಾಶ ಕಲ್ಪಿಸಬೇಕು ಎಂಬ ಮಕ್ಕಳ ಕೋರಿಕೆಗೆ ಸ್ಪಂದಿಸಿದ ಡಿಸಿ, ತಕ್ಷಣ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಕ್ಕಳ ರಕ್ಷಣೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಿಸಿ ಟಿವಿ, ಪ್ರೊಜೆಕ್ಟರ್, ಟಿವಿ, ಗ್ರಂಥಾಲಯ ಸೌಲಭ್ಯ ಹಾಗೂ ಸ್ವಚ್ಛತೆ ವೀಕ್ಷಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲೋಕೇಶ್ವರಪ್ಪ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಭಾಕರ್, ಸರ್ಕಾರಿ ಬಾಲಕರ ಬಾಲ ಮಂದಿರ ಅಧೀಕ್ಷಕಿ ಸುನೀತಾ, ಸರ್ಕಾರಿ ಬಾಲಕಿಯರ ಬಾಲಮಂದಿರ ಅಧೀಕ್ಷಕಿ ಜ್ಯೋತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net