'ಪ್ರತಿಭೆ ಪ್ರೋತ್ಸಾಹದಿಂದ ಸಂಸ್ಕೃತಿ ಅನಾವರಣ': ವಾಲ್ಮೀಕಿ ಸಿರಿ ಕಾರ್ಯಕ್ರಮದಲ್ಲಿ ಶಾಸಕ ಟಿ. ರಘುಮೂರ್ತಿ

CLK Valmiki
Published on

ಚಳ್ಳಕೆರೆ: ಸಮಾಜದ ಸಂಸ್ಕೃತಿಯನ್ನು ಪೋಷಣೆ ಮಾಡಲು ಮತ್ತು ಅದನ್ನು ಮುಂದಿನ ಪೀಳಿಗೆಗೆ ತಲುಪಿಸಲು ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದು ಅತ್ಯಗತ್ಯ ಎಂದು ಶಾಸಕ ಟಿ. ರಘುಮೂರ್ತಿ ಅವರು ಹೇಳಿದರು.

ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಸೋಮವಾರ 'ವಾಲ್ಮೀಕಿ ಸಿರಿ-2025' ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಾರ್ಯಕ್ರಮವನ್ನು ನಾಯಕರ ವಿದ್ಯಾರ್ಥಿ ನಿಲಯ, ಶ್ರೀ ವಾಲ್ಮೀಕಿ ಕಲ್ಯಾಣ ಮಂಟಪ ಹಾಗೂ ಶ್ರೀ ವಾಲ್ಮೀಕಿ ಮಹಿಳಾ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಚಳ್ಳಕೆರೆಯ ಸಂಸ್ಕೃತಿ ಅನಾವರಣ

"ಚಳ್ಳಕೆರೆ ಭೌಗೋಳಿಕವಾಗಿ ಬಯಲುಸೀಮೆಯಾಗಿದ್ದರೂ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲೆಗಳಲ್ಲಿ ಮಾದರಿಯಾಗಿದೆ. ಇಲ್ಲಿನ ಸಂಸ್ಕೃತಿಯನ್ನು ಸಮಾಜಕ್ಕೆ ಅನಾವರಣಗೊಳಿಸುವ ಪ್ರತಿಭಾವಂತರಿಗೆ ಕೊರತೆಯಿಲ್ಲ" ಎಂದು ಶಾಸಕರು ಅಭಿಪ್ರಾಯಪಟ್ಟರು.

ಇದೇ ವೇಳೆ, ಮಹಿಳೆಯರ ಪ್ರತಿಭೆಯನ್ನು ಗುರುತಿಸಿ ವಿವಿಧ ಕಲಾಪ್ರಕಾರಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿರುವುದು ಮಾದರಿ ಎನಿಸಿದೆ. ಇಂತಹ ಪ್ರೋತ್ಸಾಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್.ಎಂ. ಮಲ್ಲಪ್ಪನಾಯಕ ವಹಿಸಿದ್ದರು. ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಬಿ. ಶಿಲ್ಪಾ, ಉಪಾಧ್ಯಕ್ಷೆ ಕವಿತಾ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ ಪಿ. ತಿಪ್ಪೇಸ್ವಾಮಿ, ಕೆ.ಪಿ. ಭೂತಯ್ಯ, ವೀರನಾಯಕ, ಬಾಳೆಕಾಯಿ ರಾಮ್‌ದಾಸ್, ಜಯಣ್ಣ, ಜಿ.ಎಸ್. ಸಂದೀಪ್‌ನಾಯಕ, ಎಚ್.ಎಂ. ಸೂರ್ಯಪ್ರಭಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net