ಮಕ್ಕಳ ಮನೋವಿಕಾಸಕ್ಕೆ ಪ್ರತಿಭೆ ಪೂರಕ

22sgr3
ಸಾಗರದಲ್ಲಿ ಬಾಲಭವನ ಯೋಜನೆಯಡಿ ಆಯೋಜಿಸಿದ್ದ ಛದ್ಮವೇಷ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜ್ಯೋತಿ ಸ್ವಾಮಿ ಪ್ರಶಸ್ತಿ ವಿತರಿಸಿದರು.
Published on

ಸಾಗರ: ಮಕ್ಕಳನ್ನು ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸುವುದರಿಂದ ಮನೋವಿಕಾಸಕ್ಕೆ ಪೂರಕವಾಗಿರುತ್ತದೆ ಎಂದು ಟಿಎಪಿಎಂಸಿ ಉಪಾಧ್ಯಕ್ಷೆ ಜ್ಯೋತಿ ಸ್ವಾಮಿ ಹೇಳಿದರು.

ನಗರದ ಗುರುಭವನದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆಯಿಂದ ಬಾಲಭವನ ಯೋಜನೆಯಡಿ ಆಯೋಜಿಸಿದ್ದ ಛದ್ಮವೇಷ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಸಂಸ್ಕಾರ, ಆದರ್ಶಗಳನ್ನು ಕಲಿಸಿಕೊಡಬೇಕು. ದೇಶಪ್ರೇಮ ಮೂಡಿಸಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಇಂತಹ ಕಾರ್ಯವನ್ನು ಇಲಾಖೆ ಮಾಡುತ್ತಿರುವುದು ಶ್ಲಾಘನೀಯ. ಪಾಲಕರು ಬದಲಾದ ದಿನಗಳಲ್ಲಿ ವ್ಯವಸ್ಥಿತವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ತೊಡಗಿಸಲು ಮಕ್ಕಳನ್ನು ಸನ್ನದ್ಧಗೊಳಿಸಬೇಕು ಎಂದರು.
ಸರ್ಕಾರಿ ಉರ್ದು ಪ್ರೌಢಶಾಲೆ ಮುಖ್ಯಶಿಕ್ಷಕ ದತ್ತಾತ್ರೇಯ ಭಟ್ ಮಾತನಾಡಿ, ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಅವರಲ್ಲಿ ಸುಪ್ತವಾಗಿರುವ ಪ್ರತಿಭೆಗೆ ನೀರೆರೆಯಬೇಕು. ಪ್ರತಿಭೆ ಯಾರ ಸ್ವತ್ತೂ ಅಲ್ಲ. ನಿರಂತರ ಪರಿಶ್ರಮದಿಂದ ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಮಕ್ಕಳಿಗೆ ಮೊಬೈಲ್‌ಗಳೇ ಮಾದರಿಯಾಗುತ್ತಿವೆ. ಅವರನ್ನು ರಂಗಭೂಮಿ, ಸಂಗೀತ, ಸಾಹಿತ್ಯ, ಕಲೆ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಬೇಕು ಎಂದು ಹೇಳಿದರು.
ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ವೈ.ಮೂರ್ತಿ, ಸಿಆರ್‌ಪಿ ಮೊಹ್ಮದ್ ಜಾವೀದ್, ಶಿಕ್ಷಕ ಎಂ.ಪಿ.ಕೃಷ್ಣಮೂರ್ತಿ, ಪ್ರಮುಖರಾದ ಸುವರ್ಣಾ ವಿನಾಯಕ, ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net