

ಮಂಡ್ಯ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ಇದಕ್ಕೆ ಪೂರಕವಾಗಿ ನನ್ನಿಂದಾಗುವ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಪ್ರತಿಭಾ ಪುರಸ್ಕಾರದ ದಾನಿಯೂ ಆದ ಜಿಲ್ಲೆ 317ಎ ಎರಡನೇ ಉಪ ಗವರ್ನರ್ ಡಾ.ಜಿ.ಮೋಹನ್ ಹೇಳಿದರು.
ತಾಲೂಕಿನ ಶಿವಪುರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕ್ಯಾಪಿಟಲ್ ಲಯನ್ಸ್ ಸಂಸ್ಥೆ ಬೆಂಗಳೂರು, ಮಂಡ್ಯ ಸಕ್ಕರೆನಾಡು ಲಯನ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಎಸ್‌ಎಸ್‌ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರಿಗೆ ಗೌರವ ಸಮರ್ಪಣೆ, ಶಾಲಾ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮುಂದಿನ ವರ್ಷವೂ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅಂತೆಯೇ ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಸಾಧನೆ ಮಾಡುವ ಮೂಲಕ ಪಾಲಕರಿಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಲಯನ್ಸ್ ಸಂಸ್ಥೆ ಸಮಾಜಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಯುದ್ಧದ ಸಂದರ್ಭದಲ್ಲಿ ಕೂಡ ಅವರ ಸಹಾಯ ಶ್ಲಾಘನೀಯ. ಎಲ್ಲ ಕೆಲಸಗಳನ್ನು ಸರ್ಕಾರ ಮಾಡಲು ಸಾಧ್ಯವಿಲ್ಲ. ಇಂತಹ ಸಂಸ್ಥೆಗಳು ಸರ್ಕಾರದ ಜತೆ ಕೈಜೋಡಿಸಿ ಬಡವರಿಗೆ ಸೌಲಭ್ಯ ತಲುಪಿಸುವ ಕೆಲಸ ಆಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ್ ಮಾಜಿ ಗವರ್ನರ್ ಆರ್.ಎಸ್.ಚೇತನ್, ಪ್ರತಿ ಬಾರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರ ಪೈಕಿ 100ಕ್ಕೆ 80ರಷ್ಟು ಜನ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರಾಗಿರುತ್ತಾರೆ ಎಂದರು.
ಲಯನ್ಸ್ ಪದಾಧಿಕಾರಿಗಳಾದ ಶಾರದಾ ಮೋಹನ್, ಹರ್ಷ ಜಾಧವ್, ರಾಮಚಂದ್ರನ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ಸೌಭಾಗ್ಯ, ಜಿ.ಆರ್.ಶಿವರಾಮು, ಗ್ರಾಪಂ ಅಧ್ಯಕ್ಷ ಪ್ರಕಾಶ್, ಮುಖಂಡರಾದ ಶ್ರೀಕಾಂತ್, ರೇವಣ್ಣ, ಮಹಾಲಿಂಗು, ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎಂ.ರಮೇಶ್, ಮಾಜಿ ಅಧ್ಯಕ್ಷ ಉಮಾಶಂಕರ್, ಮೋಹನ್, ವಸಂತಕುಮಾರ, ಪಿಡಿಒ ಗಂಗಾಧರ್, ಸಕ್ಕರೆ ನಾಡು ಲಯನ್ಸ್ ಸಂಸ್ಥೆಯ ಕೆ.ಆರ್.ಶಶಿಧರ್ ಈಚಗೆರೆ ಇತರರಿದ್ದರು.