ಮೈಸೂರು ನಗರಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಬಳಗದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

19
ನಿವೇದಿತ ನಗರದ ಎಸ್.ಆರ್.ಸುಬ್ಬರಾವ್ ಉದ್ಯಾನದಲ್ಲಿ ಶನಿವಾರ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಪುರಸ್ಕರಿಸಲಾಯಿತು. ಟಿ.ಎಸ್.ಶ್ರೀವತ್ಸ, ಕವೀಶ್‌ಗೌಡ ,ರಘು ಆರ್.ಕೌಟಿಲ್ಯ, ಜೆ.ಎಸ್.ಜಗದೀಶ್, ಶಿವಕುಮಾರ್ ಇತರರಿದ್ದರು.
Published on

ಮೈಸೂರು: ಯುವಜನತೆಯೇ ಭಾರತದ ದೊಡ್ಡ ಶಕ್ತಿ. ಮಾನವ ಸಂಪನ್ಮೂಲದಲ್ಲಿ ಶಕ್ತಿ ತುಂಬುವುದು ಯುವಜನರೆ ಆಗಿದ್ದಾರೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.

ನಗರಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಬಳಗದ ವತಿಯಿಂದ ನಿವೇದಿತನಗರದ ಎಸ್.ಆರ್.ಸುಬ್ಬರಾವ್ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತ ಅಭಿವೃದ್ಧಿ ಆಗುತ್ತಿರುವುದು ಶಿಕ್ಷಣದಿಂದ ಮಾತ್ರ ಅಲ್ಲ. ಇಲ್ಲಿ ಸಂಸ್ಕೃತಿ ಹಾಗೂ ನಮ್ಮ ಮಾನವ ಸಂಪನ್ಮೂಲದಿಂದ ಎಂದರು.

ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಓದಿ, ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜ ಸೇವೆ ಮಾಡಲು ಮುಂದಾಗಬೇಕು. ತಮ್ಮ ಅಭಿವೃದ್ಧಿಯ ಜತೆಗೆ ಸಮಾಜದ ಅಭಿವೃದ್ಧಿಗೆ ಮತ್ತು ದೇಶದ ಬೆಳವಣಿಗೆಗೂ ಸಹಕಾರ ನೀಡಬೇಕು ಎಂದರು.

ನೈಪುಣ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಘು ಆರ್.ಕೌಟಿಲ್ಯ ಮಾತನಾಡಿ, ಪಾಲಕರು ಮಕ್ಕಳ ಬಗ್ಗೆ ಕನಸು ಕಾಣುವ ಜತೆಗೆ ಅವರ ಬದುಕು ರೂಪಿಸುವ ಕೆಲಸ ಮಾಡಬೇಕು. ಪಾಲಕರು ಮಕ್ಕಳ ಆಸಕ್ತಿ ಮತ್ತು ಪ್ರತಿಭೆಗೆ ಅನುಗುಣವಾಗಿ ಅವರಿಗೆ ದಾರಿ ತೋರಿಸಬೇಕು ಎಂದರು.

ಪ್ರಪಂಚದ ಎಲ್ಲ ಸಾಧಕರು ಕಷ್ಟದಲ್ಲೇ ಮೇಲೆ ಬಂದಿದ್ದಾರೆ. ಪಾಲಕರು ಮಕ್ಕಳಿಗೆ ಕಷ್ಟ ಪರಿಚಯ ಮಾಡಬೇಕು ಎಂದರು. ಇಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಜೆ.ಎಸ್.ಜಗದೀಶ್ ಅವರು ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಅವರು ಸಮಾಜ ಮುಖಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ದೊರೆಯುತ್ತದೆ. ಮುಂದೆ ಚೆನ್ನಾಗಿ ಓದಲು ಉತ್ಸಾಹ ಬರುತ್ತದೆ. ಇಂತಹ ಕೆಲಸವನ್ನು ಎಲ್ಲ ಜನ ಪ್ರತಿನಿಧಿಗಳು ಮಾಡಬೇಕು ಎಂದರು.

ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ವೈದ್ಯ, ಕಲಾವಿದ, ವಕೀಲ, ಉತ್ತಮ ಅಧಿಕಾರಿ, ಇಂಜಿನಿಯರ್ ಆಗಬಹುದು. ಪಿಯುಸಿ ನಂತರ ಅನೇಕ ಅವಕಾಶ ಇದೆ. ಒಂದೇ ಕ್ಷೇತ್ರದಲ್ಲೇ ಸಾಧನೆ ಮಾಡಬೇಕು ಅಂತ ಇಲ್ಲ. ನಿಮ್ಮ ಮುಂದೆ ಅಪಾರ ಅವಕಾಶ ಇದ್ದು, ನಿಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ದೊಡ್ಡ ಮಟ್ಟದ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ವಿದ್ಯಾ ವಿಕಾಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕವೀಶ್‌ಗೌಡ ಮಾತನಾಡಿ, ಮಕ್ಕಳು ವಿದ್ಯಾವಂತರಾಗಿ, ಉತ್ತಮ ಜೀವನ ರೂಪಿಸಿಕೊಳ್ಳಬೇಕು. ತಂದೆ ತಾಯಿಗಳನ್ನು ಗೌರವದಿಂದ ಕಾಣುವ ಜತೆಗೆ ಚೆನ್ನಾಗಿ ನೋಡಿಕೊಳ್ಳಬೇಕು. ದೇಶದ ಉತ್ತಮ ಪ್ರಜೆ ಆಗಿ ಬೆಳೆಯಬೇಕು. ಶಿಕ್ಷಣದ ಜತೆಗೆ ಕ್ರೀಡೆ, ಪಠ್ಯೇತರ ಚಟುವಟಿಕೆಗಳಲ್ಲೂ ಭಾಗಿಯಾಗಬೇಕು ಎಂದು ತಿಳಿಸಿದರು.

ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಮಾತನಾಡಿ, 14 ವರ್ಷದಿಂದ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಕೆಲಸ ಮಾಡಿಕೊಂಡು ಬಂದಿದ್ದೇವೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರಮುಖ ಹಂತವಾಗಿದೆ. ಇಂತಹ ಹಂತವನ್ನು ಯಶಸ್ವಿಯಾಗಿ ಪೂರೈಸಿದ ಮಕ್ಕಳನ್ನು ಉತ್ತೇಜನ ನೀಡುವ ದೃಷ್ಟಿಯಿಂದ ಪುರಸ್ಕರಿಸಲಾಗುತ್ತಿದೆ ಎಂದರು.

ಮಾಜಿ ಮೇಯರ್ ಶಿವಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಮುಖಂಡರಾದ ಆಯರಹಳ್ಳಿ ವಿರೂಪಾಕ್ಷ, ಶಿವಕುಮಾರ್, ಲೋಹಿತ್ ಶರ್ಮ, ಶ್ರೀನಿವಾಸ್, ಸತ್ಯಾನಂದವಿಟ್ಟು, ಪ್ರಸನ್ನ ಕುಮಾರ್, ವಿಜಯ್ ಕುಮಾರ್, ರವಿ ಇತರರಿದ್ದರು.

ಇದೇ ವೇಳೆ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುವ 300 ಕ್ಕೂ ಹೆಚ್ಚು ಮಕ್ಕಳನ್ನು ಪುರಸ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net