ಸಾಧನೆ ಪ್ರಯತ್ನವಾದಿಗಳ ಸ್ವತ್ತು

27blk1
ಕರಡ್ಯಾಳ ಚನ್ನಬಸವೇಶ್ವರ ವಾಣಿಜ್ಯ ಕಾಲೇಜಿನಲ್ಲಿ ಶನಿವಾರ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ತಾಪಂ ಇಒ ಹಣಮಂತರಾಯ ಕೌಟಗೆ, ಡಾ.ಆಶಾ ಮುದಾಳೆ, ಸುಧಾಕರ ಬಿರಾದಾರ, ಸ್ವಪ್ನಾ ಜೋಶಿ ಇತರರಿದ್ದರು.
Published on

ಭಾಲ್ಕಿ: ವಿದ್ಯಾರ್ಥಿಗಳು ಜೀವನದಲ್ಲಿ ಹಣೆಬರಹ ನೆಚ್ಚಿಕೊಂಡರೆ ಏನೂ ಸಾಧಿಸಲು ಸಾಧ್ಯವಿಲ್ಲ. ನಿರಂತರ ಪ್ರಯತ್ನದಿಂದ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಕರಡ್ಯಾಳ ಚನ್ನಬಸವೇಶ್ವರ ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ವಾಣಿಜ್ಯ ವಿಭಾಗದಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಸಾಧನೆ ಎಂಬುದು ಪ್ರಯತ್ನವಾದಿಗಳ ಸ್ವತ್ತು. ಯಾರು ಜೀವನದಲ್ಲಿ ಕಷ್ಟ ಪಡುತ್ತಾರೋ ಅಂಥವರನ್ನು ಯಶಸ್ಸು ಬೆನ್ನತ್ತಿ ಬರುತ್ತದೆ. ವಿದ್ಯಾರ್ಥಿಗಳು ಯಾವುದೇ ದುಶ್ಚಟ, ಆಕರ್ಷಣೆಗಳಿಗೆ ಬಲಿಯಾಗಬಾರದು. ಓದಿನ ಕಡೆಗೆ ಸಂಪೂರ್ಣ ಮನಸ್ಸು ಕೇಂದ್ರೀಕರಿಸಬೇಕು. ಜತೆಗೆ ದೈವಿ ಭಕ್ತಿಯನ್ನು ಬೆಳೆಸಿಕೊಂಡರೆ ಮನಸ್ಸು ಪರಿಶುದ್ಧವಾಗಿರಿಸಲು ನೆರವಾಗಲಿದೆ ಎಂದರು.

ವಾಣಿಜ್ಯ ವಿಭಾಗದಲ್ಲಿ ವಿಪುಲ ಅವಕಾಶಗಳಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಲ್ಲಿ ಸಿಎ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಣಮಂತರಾಯ ಕೌಟಗೆ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದಲ್ಲಿ ಸಮಾಜ ಗೌರವ ನೀಡುತ್ತದೆ. ಶಿಕ್ಷಕರು ಮತ್ತು ಪಾಲಕರ ಮಾರ್ಗದರ್ಶನದಲ್ಲಿ ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಿಆರ್‌ಪಿ ನೀಲಕಂಠ ಮಾತನಾಡಿದರು. ಅಲ್ಲಮಪ್ರಭು ಬಿ.ಇಡಿ ಕಾಲೇಜು ಪ್ರಾಚಾರ್ಯ ಡಾ.ಆಶಾ ಮುದಾಳೆ, ಬಿಎಸ್ಸಿ ಪ್ರಾಚಾರ್ಯ ಸುಧಾಕರ ಬಿರಾದಾರ, ಸಿಬಿಎಸ್ಸಿ ಪ್ರಾಚಾರ್ಯ ಎನ್.ರಾಜು ಇತರರಿದ್ದರು. ಪ್ರಾಚಾರ್ಯ ಸ್ವಪ್ನಾ ಜೋಶಿ ಸ್ವಾಗತಿಸಿದರು. ಮಧುಕರ ಗಾಂವಕರ ನಿರೂಪಣೆ ಮಾಡಿದರು. ಡಾ.ಅಕ್ಕನಾಗಮ್ಮ ಕರ್ಪೂರ ವಂದಿಸಿದರು. ಭಾಗ್ಯಶ್ರೀ, ಭಾಗ್ಯವಂತಿ ವಚನ ಗಾಯನ, ಅನ್ನಪೂರ್ಣ ಕನಶೆಟ್ಟೆ ಸಂಗಡಿಗರು ವಚನ ನೃತ್ಯ ನಡೆಸಿಕೊಟ್ಟರು.

ಪ್ರತಿಭೆಗಳಿಗೆ ಸನ್ಮಾನ: ವಾಣಿಜ್ಯ ವಿಭಾಗದಲ್ಲಿ ೨೦೨೩-೨೪ರ ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಗೆ ಟಾಪರ್ ಬಂದ ಪ್ರೇಮ ಪಾಂಡುರಂಗ, ಆನಂದ ಸಿದ್ರಾಮ, ಸೃಷ್ಟಿ ರಾಜಕುಮಾರ, ಶ್ವೇತಾ ನರೇಂದ್ರ, ನೀಲಾಂಬಿಕಾ ಬಸವರಾಜ, ಭುವನೇಶ್ವರಿ ಧನರಾಜ, ವೈಷ್ಣವಿ ಚಂದ್ರಕಾಂತ, ಯಲ್ಲಗೊಂಡ ವಿಜಯಕುಮಾರ ಮತ್ತು ಪ್ರೇಮ ರಮೇಶ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಪೂಜ್ಯರು ಆಶೀರ್ವದಿಸಿದರು.

ವಾಣಿಜ್ಯ ವಿಭಾಗದಲ್ಲಿ ನಮ್ಮ ಸಂಸ್ಥೆ ವಿದ್ಯಾರ್ಥಿ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿರುವುದು ಸಂತಸ ತರಿಸಿದೆ. ಮುಂದಿನ ವರ್ಷ ರಾಜ್ಯಕ್ಕೆ ಟಾಪರ್ ಸ್ಥಾನ ತರುವ ಪ್ರಯತ್ನವಾಗಬೇಕು.
| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net