

ಕೆ.ಆರ್.ಪೇಟೆ: ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡುವ ಮಲ್ಲಿಕಾರ್ಜುನ ಅವರಂತಹ ಹೃದಯವಂತರು ಬೇಕಾಗಿದ್ದಾರೆ ಎಂದು ಕಾಗಿನೆಲೆ ಕನಕ ಗುರುಪೀಠದ ಕೆ.ಆರ್.ನಗರ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಆರ್‌ಟಿಒ ಮಲ್ಲಿಕಾರ್ಜುನ ಅಭಿಮಾನಿ ಬಳಗದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಲ್ಲಿಕಾರ್ಜುನ ಅವರು ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರತಿಭಾ ಪುರಸ್ಕಾರ ನೀಡಿ ಕೈಲಾದ ಸಹಾಯ ಮಾಡುವ ಮೂಲಕ ಸಾರ್ಥಕತೆ ತಂದುಕೊಟ್ಟಿದ್ದಾರೆ. ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಜಾಗತಿಕ ಸವಾಲುಗಳು ಹಾಗೂ ಸ್ಪರ್ಧೆಗಳನ್ನು ಎದುರಿಸಿ ಮುನ್ನಡೆಯಲು ಯುವ ಜನರು ಆತ್ಮವಿಶ್ವಾಸದಿಂದ ಸಜ್ಜಾಗಬೇಕು. ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬ ಸತ್ಯ ಅರಿತು ಶ್ರದ್ಧಾ ಭಕ್ತಿಯಿಂದ ವ್ಯಾಸಂಗ ಮಾಡಿ ಗುರಿಸಾಧನೆ ಮಾಡಿ, ತಂದೆ-ತಾಯಿಗಳು ಮತ್ತು ಗುರು-ಹಿರಿಯರಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮ್ ಮಾತನಾಡಿ, ವಿದ್ಯಾರ್ಥಿಗಳಿಗೆ ಅಂಕಗಳಿಕೆಯೊಂದೇ ಮಾನದಂಡವಲ್ಲ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದ ಜ್ಞಾನದ ಜತೆಗೆ ಲೋಕಜ್ಞಾನವನ್ನು ಅರಿತುಕೊಂಡು ಸಾಧನೆ ಮಾಡಬೇಕು ಎಂದು ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್. ರಾಮಕೃಷ್ಣೇಗೌಡ ಮಾತನಾಡಿ, ಮಲ್ಲಿಕಾರ್ಜುನ ಅವರಂತಹ ಪ್ರಾಮಾಣಿಕ ಕಳಕಳಿ ಹೊಂದಿರುವ ದಕ್ಷ ಅಧಿಕಾರಿಗಳು ಇಂದಿನ ಸಮಾಜಕ್ಕೆ ಬೇಕಾಗಿದ್ದಾರೆ. ಸರಳತೆ, ಸಜ್ಜನಿಕೆ, ಬಡ ಜನರು ಹಾಗೂ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಹೊಂದಿರುವ ಜನರು ವಿರಳವಾಗುತ್ತಿರುವ ಸಮಯದಲ್ಲಿ ಮಲ್ಲಿಕಾರ್ಜುನ ಅವರು ಬೆಳ್ಳಿ ಚುಕ್ಕಿಯಂತೆ ಪ್ರಜ್ವಲಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗ್ರಾಮೀಣ ವಿದ್ಯಾರ್ಥಿಗಳ ನೈಜ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಆದರ್ಶ ವ್ಯಕ್ತಿತ್ವ ಹೊಂದಿರುವ ಜನರು ಇಂದಿನ ಸಮಾಜಕ್ಕೆ ಅವಶ್ಯಕವಾಗಿ ಬೇಕಾಗಿದ್ದಾರೆ ಎಂದರು.
ವ್ಯಕ್ತಿತ್ವ ವಿಕಾಸನ ಮಾರ್ಗದರ್ಶಕ ಶಂಕರ್ ಬೆಳ್ಳೂರು, ವಿಭಾಗಿಯ ಸಾರಿಗೆ ಅಧಿಕಾರಿ ಸಿ.ಟಿ.ಮೂರ್ತಿ, ಕಾಗಿನೆಲೆ ಮಠದ ಅರುಣ ಸಿದ್ದೇಶ್ವರ ಸ್ವಾಮೀಜಿ, ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ, ಬೇಬಿ ಬೆಟ್ಟದ ಶ್ರೀ ಶಿವಬಸವ ಸ್ವಾಮೀಜಿ, ತೆಂಡೆಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಇತರರು ಇದ್ದರು.