ಮೈಸೂರು: ಜಿಲ್ಲಾ ವಿಶ್ವಕರ್ಮ ಯುವಜಾಗೃತಿ ವೇದಿಕೆಯಿಂದ ಆ.18ರಂದು ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ನಾಲ್ವರು ಸಾಧಕರಿಗೆ ವಿಶ್ವಕರ್ಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವೇದಿಕೆ ಅಧ್ಯಕ್ಷ ಕೆ. ಕೆಂಡಗಣ್ಣ ವಿಶ್ವಕರ್ಮ ತಿಳಿಸಿದರು.
ನಗರದ ಜಗನ್ಮೋಹನ ಅರಮನೆಯಲ್ಲಿ ಅಂದು ಬೆಳಗ್ಗೆ 10.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ 200 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಿಲ್ಪಿ ಅರುಣ್ ಯೋಗಿರಾಜ್, ಹುಬ್ಬಳ್ಳಿ ಮತ್ತು ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ರಾಮಣ್ಣ ಬಡಿಗೇರ್, ಬಿಗ್ ಬಾಸ್ ವಿಜೇತ ಕಾರ್ತಿಕ್ ಮಹೇಶ್, ಮಹಾನಟಿ ಕಾರ್ಯಕ್ರಮ ವಿಜೇತೆ ಪ್ರಿಯಾಂಕಾ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.
ಮಧುಗಿರಿ ತಾಲೂಕಿನ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸಚಿವ ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ತಿನ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್ ಬೋಸ್, ಶಾಸಕರಾದ ತನ್ವೀರ್‌ಸೇಠ್, ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ಟಿ.ಎಸ್.ಶ್ರೀವತ್ಸ, ದರ್ಶನ್ ಧ್ರುವನಾರಾಯಣ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ಎಲ್.ಸತೀಶ್, ಟಿ.ಎಸ್.ಸಿದ್ದರಾಜು, ಶ್ರೀಲಕ್ಷ್ಮಿ, ಸಿದ್ದೇಶ್‌ರಾಜು, ಮಹೇಶ್ ಇದ್ದರು.