

ಮಂಡ್ಯ: ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಪುರಸ್ಕಾರ ಅತ್ಯಾವಶ್ಯಕ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ನಗರದ ಡಾ.ನಾ.ಸು.ಹರ್ಡೀಕರ್ ಭವನದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ, ಸೇಂಟ್‌ಜಾನ್ ಆಂಬ್ಯುಲೆನ್ಸ್ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರ್ಥಿಕ ನೆರವು ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಲಭ್ಯವಾಗಬೇಕು. ನಾವೇನು ಜೀವನದಲ್ಲಿ ಸಾಧನೆ ಮಾಡಿದ್ದೀವಿ ಎನ್ನುವವರನ್ನು ಗುರುತಿಸಿ, ಬೆನ್ನುತಟ್ಟುವ ಕಾರ್ಯ ಆಗುತ್ತಿರಬೇಕು. ಶೇ.90ಕ್ಕಿಂತಲೂ ಹೆಚ್ಚು ಅಂಕ ಪಡೆದವರಿಗೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ನುಡಿದರು.
ಜಿಲ್ಲೆಯ ಹೆಮ್ಮೆಯ ಸಭಾಂಗಣ ಡಾ.ನಾ.ಸು.ಹರ್ಡಿಕರ್ ಭವನ ಅಭಿವೃದ್ದಿಗೆ 5 ಲಕ್ಷ ರೂ ಅನುದಾನ ನೀಡಲಾಗುವುದು. ಎಲ್ಲ ವಿದ್ಯಾರ್ಥಿಗಳು ದೇಶ, ರಾಜ್ಯ, ಜಿಲ್ಲೆಯ ಶಾಲೆಗೆ ಕೀರ್ತಿ ತರುವಂತೆ ಸಾಧನೆ ಮಾಡಿ. ಪಾಲಕರಿಗೆ ಸಾರ್ಥಕತೆಯ ನೆಮ್ಮದಿ ನೀಡಿ ಎಂದು ಕಿವಿಮಾತೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘುನಾಥ್ ಮಾತನಾಡಿ, ಮಹಾಸಭಾದಿಂದ ಅನೇಕ ವರ್ಷದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಾ ಬರಲಾಗುತ್ತಿದೆ. ಇದರ ಜತೆಯಲ್ಲಿ ಬ್ರಾಹ್ಮಣೇತರರಿಗೂ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಸಮಾಜದಲ್ಲಿ ಎಲ್ಲರೂ ಒಂದೇ ಎನ್ನುವ ಮನೋಭಾವನೆ ಇರಬೇಕು ಎಂದರು.
ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮಾತನಾಡಿ, ಸಮಾಜದ ನವನಿರ್ಮಾಣ ಮಾಡುವಂತಹ ಅಭಿಲಾಸೆಯಿಂದ ಯುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಮೂಲಕ ಆತ್ಮವಿಶ್ವಾಸ ಹೆಚ್ಚಿಸುತ್ತಿರುವುದು ಅಭಿನಂದನಾರ್ಹ. ಇವತ್ತಿನ ದಿನಗಳಲ್ಲಿ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಬೇಕು. ಪುರಸ್ಕಾರ ಪಡೆದವರು ಮತ್ತೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವುದು ಶ್ಲಾಘನೆ. ಆ ಎತ್ತರಕ್ಕೆ ಬೆಳೆಯಬೇಕು ಎಂದು ಆಶಿಸಿದರು.
ಭಾರತ ಸೇವಾ ದಳ ಜಿಲ್ಲಾ ಕಾರ್ಯದರ್ಶಿ ಜಿ.ವಿ.ನಾಗರಾಜು ಮಾತನಾಡಿದರು. ಜಿಲ್ಲಾಧ್ಯಕ್ಷ ಬಿ.ಸಿ.ಶಿವಾನಂದ, ಮಹಾಸಭಾಧ ಹಿರಿಯ ಉಪಾಧ್ಯಕ್ಷ ಲಕ್ಷ್ಮೀಕಾಂತ್, ಮುಡಾ ಅಧ್ಯಕ್ಷ ನಹೀಂ, ಉಪನ್ಯಾಸಕಿ ಡಾ.ಸುಮಾರಾಣಿ, ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಪ್ರೊ.ನರಸಿಂಹಮೂರ್ತಿ, ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿಯಮಿತ ಅಧ್ಯಕ್ಷ ಬೇಲೂರು ಸೋಮಶೇಖರ್, ನಗರಸಭಾ ಮಾಜಿ ಸದಸ್ಯ ಶಿವಪ್ರಕಾಶ್‌ಬಾಬು, ಸದಸ್ಯ ಶ್ರೀಧರ್, ಸೇಂಟ್‌ಜಾನ್ ಆಂಬ್ಯುಲೆನ್ಸ್ ಖಜಾಂಚಿ ಸಜ್ಜನ್‌ಕೊಠಾರಿ, ಕುಮಾರ್, ಚಂದನಾ ಪ್ರಜ್ವಲ್, ಸೇವಾದಳ ಜಿಲ್ಲಾ ಸಂಘಟಕ ಸಿ.ಎಸ್.ಗಣೇಶ್, ಎಲ್.ಸಂದೇಶ್, ಶಿಕ್ಷಕಿ ಉಷಾರಾಣಿ ಇತರರಿದ್ದರು. ಇದೇ ಸಂದರ್ಭದಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಗತ್ಯಯುಳ್ಳವರಿಗೆ ಆರ್ಥಿಕ ನೆರವು, ಸಾಧಕರಿಗೆ ಅಭಿನಂದನೆ ನಡೆಯಿತು.