ಸಾಧನೆ ಮಾಡುವ ಗುರಿಯೊಂದಿಗೆ ಅಭ್ಯಾಸ ಮಾಡಿ: ಅಲಯನ್ಸ್‌ನ ಸೌತ್ ಮಲ್ಪಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಸಲಹೆ

Talent award for students Mandya
Published on

ಮಂಡ್ಯ: ಪ್ರತಿಭೆ ಮತ್ತು ಸಾಧನೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಆದ್ದರಿಂದ ನಿರಂತರ ಪರಿಶ್ರಮದಿಂದ ಓದಿದರೆ ಪ್ರತಿಭಾವಂತರಾಗುತ್ತಾರೆ. ಗುರಿ ತಲುಪಲು ಶ್ರಮಪಟ್ಟರೆ ಸಾಧಕರಾಗುತ್ತಾರೆ ಎಂದು ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.

ನಗರದ ಸ್ಪೋರ್ಟ್ಸ್ ಸಂಸ್ಥೆ ಸಭಾಂಗಣದಲ್ಲಿ ಅಸೋಸಿಯೇಷನ್ ಆ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಹಾಗೂ ಕೃಷಿಕ ಅಲಯನ್ಸ್‌ನಿಂದ ಆಯೋಜಿಸಿದ್ದ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನ ತಂಡದ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಐಆರ್‌ಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗುರಿ ಇರಿಸಿಕೊಂಡು ಸಾಧನೆ ಮಾಡಬೇಕು. 23 ರಿಂದ 24 ವರ್ಷದೊಳಗಿನ ವಿದ್ಯಾವಂತರು ಉನ್ನತಮಟ್ಟದ ಅಧಿಕಾರಿಗಳಾಗುತ್ತಿರುವುದು ಹೆಮ್ಮೆಯ ವಿಷಯ. ಕೆಲ ಪಾಲಕರು ತಮ್ಮ ಮಕ್ಕಳು ವೈದ್ಯರು, ಇಂಜಿನಿಯರ್ ಆಗಬೇಕೆಂದು ಒತ್ತಡ ಹಾಕುವುದು ಸರಿಯಲ್ಲ. ಪರಿಣಾಮ ವಿದ್ಯಾರ್ಥಿಗಳು ತಮ್ಮ ಇಚ್ಚೆಗೆ ಅನುಗುಣವಾಗಿ ಓದಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲಿ. ಉನ್ನತಮಟ್ಟದ ಅಧಿಕಾರಿಗಳಾಗಿ ಸೇವೆ ಮಾಡಲಿ. ಗ್ರಾಮೀಣ ಜನತೆಯ ಕಷ್ಟ ನೋವುಗಳಿಗೆ ಹೊಸ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಂದಿನ ವಿದ್ಯಾರ್ಥಿಗಳು ಸಂಶೋಧನೆ ಮಾಡಲಿ ಎಂದು ಕಿವಿಮಾತೇಳಿದರು.

ಅಲಯನ್ಸ್ ಸಂಸ್ಥೆಯ ಒಂದನೇ ಉಪ ಗವರ್ನರ್ ಕೆ.ಆರ್.ಶಶಿಧರ್ ಈಚೆಗೆರೆ, ಎರಡನೇ ಉಪ ಗವರ್ನರ್ ಕೆ.ಎಸ್.ಚಂದ್ರಶೇಖರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ವಿ.ಎಸ್.ನಾಗರಾಜ, ಖಜಾಂಚಿ ಆರ್.ಮಹೇಶ್, ಪ್ರಾಂತೀಯ ಅಧ್ಯಕ್ಷ ಟಿ. ಎನ್.ರಕ್ಷಿತ್‌ರಾಜ್, ವಲಯಾಧ್ಯಕ್ಷ ದಯಾನಂದ್, ಕೃಷಿಕ ಅಲಯನ್ಸ್ ಸಂಸ್ಥೆ ನೂತನ ಅಧ್ಯಕ್ಷ ಎ.ಆರ್.ಕುಮಾರ್, ಕಾರ್ಯದರ್ಶಿ ಮೋಹನ್‌ಕುಮಾರ್, ಖಜಾಂಚಿ ಸಿ.ಎಸ್.ಮಲ್ಲೇಶ್, ಉಪಾಧ್ಯಕ್ಷ ಎಂ.ಕುಮಾರ್, ಪ್ರತಿಭಾಂಜಲಿ ಪ್ರೊ.ಡೇವಿಡ್, ಎಸ್.ಎನ್.ಕೃಷ್ಣಪ್ಪ, ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ನಟರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net