ಮಹಿಳೆಯರಲ್ಲಿ ಸಂಘಟನೆ ಹೆಚ್ಚಾಗಲಿ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಲಹೆ

Talent Award for Govt School Students
Published on

ಮಂಡ್ಯ: ಮಹಿಳೆಯರಲ್ಲಿ ಸಂಘಟನಾತ್ಮಕ ಭಾವನೆ ಹೆಚ್ಚಾಗಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.

ನಗರದ ಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕೌಶಲ ಯುವತಿ ಮತ್ತು ಮಹಿಳಾ ಮಂಡಳಿ ಆಯೋಜಿಸಿದ್ದ ಸರ್ಕಾರಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಒಗ್ಗೂಡಿ ಸಹಿಷ್ಣುತೆಯಿಂದ ಸೇವಾಕಾರ್ಯ ಮಾಡುತ್ತಿರುವುದು ಮಾದರಿ. ಕೌಶಲ ಯುವತಿ ಮತ್ತು ಮಹಿಳಾ ಮಂಡಳಿಯಲ್ಲಿ 25 ಜನ ಸದಸ್ಯರಿದ್ದು, ಒಗ್ಗಟ್ಟಿನ ಬಲದಿಂದ ಮುನ್ನೆಡೆಯುತ್ತಿದ್ದೀರಿ. ಇದು ಹೀಗೆ ಸಾಗಲಿ, ಒಬ್ಬರನ್ನೊಬ್ಬರನ್ನ ಅರ್ಥಮಾಡಿಕೊಂಡಿರುವುದಕ್ಕೆ ನಿಮ್ಮ ಸಂಸ್ಥೆ ಬೆಳೆಯುತ್ತಿದೆ ಎಂದು ತಿಳಿಸಿದರು.

ಸಮಾಜಮುಖಿ ಸೇವಾ ಕಾರ್ಯ ಮಾಡಲು ಸಾಧ್ಯವಾಗುತ್ತಿದೆ. ನಿಮ್ಮಲ್ಲಿ ವಿದ್ಯಾವಂತರಿದ್ದೀರಿ, ಬುದ್ದಿವಂತರಿದ್ದೀರಿ, ನಾಗರಿಕ ಸಮಾಜ ಕಟ್ಟಲು ಸಂಕಲ್ಪಿಸಿರುವುದು ಸಾಧನೆಯಾಗಲಿದೆ. 15 ವರ್ಷದಿಂದ ನಿರಂತರವಾಗಿ ಸೇವಾ ಕಾರ್ಯ ಮಾಡಲು ತಮ್ಮ ಮನೆಗಳ ಹಣವನ್ನು ಹಾಕಿ, ಯಾವುದೇ ಲೋಪವಿಲ್ಲದೆ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದೀರಿ, ಇದು ಇದೇ ರೀತಿ ಮುಂದುವರಿಯಲಿ. ಸಾಮಾಜಿಕ ವಿಷಯಗಳಲ್ಲಿ ನೋಂದವರಿಗೆ, ಕೋವಿಡ್-19ರ ದಿನಗಳಲ್ಲಿ ನೆರವಾಗಿರುವುದು, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಹಸ್ತ ನೀಡುತ್ತಿರುವುದು, ಪರಿಸರ ಕಾಳಜಿ ಸೇವಾಕಾರ್ಯಗಳಲ್ಲಿ ವಿಶೇಷವಾದ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಾ ಬರುತ್ತಿದ್ದೀರಿ ಎಂದು ತಿಳಿಸಿದರು.

ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಎಂ.ಸಿ.ಲಂಕೇಶ್ ಮಂಗಲ, ಕೆ.ಪಿ.ಅರುಣಕುಮಾರಿ, ಇಂಜಿನಿಯರ್ ಕೆಂಪರಾಜು, ಮುಖ್ಯಶಿಕ್ಷಕಿ ರಾಜಮಣಿ, ಎಸ್‌ಡಿಎಂಸಿ ಅಧ್ಯಕ್ಷ ಶೇಖರ್, ವಿಜಯಾ ನಾಗಣ್ಣ, ಅರುಣ ಕೆಂಪರಾಜು ಇತರರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net