ಹೂಗಾರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

DSC_5704
Published on

ರಾಯಚೂರು: ನಗರದ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ನ.5ರಂದು ಬೆಳಗ್ಗೆ 11.30ಕ್ಕೆ ಹೂಗಾರ ಮಾದಯ್ಯ ಜಯಂತೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಹೂಗಾರ ಸಮಾಜ ಸಂಘದ ಅಧ್ಯಕ್ಷ ಈರಣ್ಣ ಹೂಗಾರ ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಜಯಂತೋತ್ಸವ ನಿಮಿತ್ತ ಸೋಮವಾರಪೇಟೆ ಹಿರೇಮಠದಿಂದ ಕಲ್ಯಾಣ ಮಂಟಪದವರೆಗೆ ವಿವಿಧ ಕಲಾತಂಡಗಳೊಂದಿಗೆ ಹೂಗಾರ ಮಾದಯ್ಯರ ಭಾವಚಿತ್ರ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಎಸ್ಸೆಸ್ಸೆಲ್ಸಿ, ಪಿಯು ದ್ವಿತೀಯ ಪರೀಕ್ಷೆಯಲ್ಲಿ ಶೇ.70ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆ ಹೊಂದಿದ 70 ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂ. ನಗದು ಬಹುಮಾನದ ಜತೆಗೆ ಸನ್ಮಾನಿಸಿ, ಗೌರವಿಸಲಾಗುತ್ತಿದೆ. ಜತೆಗೆ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಜಿಲ್ಲಾ ಸಮಾವೇಶವನ್ನು ನಡೆಸಲಾಗುವುದು.
ಈ ಹಿಂದೆ ತಾಲೂಕುವಾರು ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಗುತ್ತಿದೆ. ಜಿಲ್ಲೆಯ ಏಳು ತಾಲೂಕುಗಳ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಚಿವ ಎನ್.ಎಸ್.ಬೋಸರಾಜು ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಸ ಪಾಟೀಲ್, ಸಂಸದರಾದ ರಾಜಾ ಅಮರೇಶ್ವರ ನಾಯಕ, ಸಂಗಣ್ಣ ಕರಡಿ ಹಾಗೂ ಜಿಲ್ಲೆಯ ಶಾಸಕರು ಮತ್ತು ಸಮಾಜದ ಮುಖಂಡರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಈರಣ್ಣ ಹೂಗಾರ ತಿಳಿಸಿದರು.
ರಾಜ್ಯ ಹೂಗಾರ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಹೂಗಾರ ಮಾತನಾಡಿ, ಸಣ್ಣ ಸಮುದಾಯವಾಗಿರುವ ಹೂಗಾರ ಸಮಾಜ ಏಳಿಗೆ ಕಾಣಲು ಸರ್ಕಾರ ಸೌಲಭ್ಯಗಳನ್ನು ಪಡೆಯುವುದು ಅಗತ್ಯವಾಗಿದೆ. ಪ್ರತ್ಯೇಕ ಅಭಿವೃದ್ಧಿ ನಿಗಮ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಸಮಾವೇಶದ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘದ ಪದಾಕಾರಿಗಳಾದ ಉಗ್ರನರಸಿಂಹಪ್ಪ ಹೂಗಾರ, ಮಲ್ಲಿಕಾರ್ಜುನ ಹೂಗಾರ, ಬಸವರಾಜ ಹೂಗಾರ, ಅಮರೇಶ, ಬಲಭೀಮ, ಲಿಂಗರಾಜು, ಮಲ್ಲಪ್ಪ ಹೂಗಾರ, ಭೀಮಣ್ಣ ಹೂಗಾರ, ಶಶಿಧರ ಹೂಗಾರ ಉಪಸ್ಥಿರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net