

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಪಠ್ಯಾಭ್ಯಾಸದ ಜತೆ ಸಾಮಾನ್ಯ ಜ್ಞಾನಾಭಿವೃದ್ಧಿ ಹೊಂದುವ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬಹುದು ಎಂದು ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.
ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಶಿಕ್ಷಣ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ. ಇತ್ತೀಚಿನ ದಿನದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಸಾಮಾನ್ಯ ಜ್ಞಾನದ ಕೊರತೆಯಾಗುತ್ತಿದೆ. ಸಮಯದ ಸದ್ಬಳಕೆ ಮಾಡಿಕೊಂಡು ಓದಿನತ್ತ ಗಮನ ಹರಿಸಿದರೆ ಜ್ಞಾನದ ಕೊರತೆ ಹೋಗಲಾಡಿಸಬಹುದು ಎಂದರು.
ಮಹಾಸಭಾ ಜಿಲ್ಲಾ ಅಧ್ಯಕ್ಷ ಪ್ರದೀಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಆನಂದ ಗಡೇಕಾರ ಪ್ರಾಸ್ತಾವಿಕ ಮಾತನಾಡಿದರು. ವಿ.ಸಿ. ಸವಡಿ, ಡಾ. ಪಾರ್ವತಿ ಹಾಲಭಾವಿ, ಶಿವಶರಣ ಕಲಬಶೆಟ್ಟರ, ಮಡಿವಾಳಪ್ಪ ಶಿರಿಯಣ್ಣವರ, ಸವಿತಾ ಅಮರಶೆಟ್ಟಿ, ಪ್ರಕಾಶ ಭಾವಿಕಟ್ಟಿ, ಡಾ. ಸುವರ್ಣಾ ಬಿರಾದಾರ ಹಾಗೂ ಪದಾಽಕಾರಿಗಳು ಇದ್ದರು. ಜಯಶ್ರೀ ಪಾಟೀಲ ನಿರೂಪಿಸಿದರು. ಚಂದ್ರಶೇಖರ ಮನಗುಂಡಿ ಸ್ವಾಗತಿಸಿದರು. ನಾಗರತ್ನಾ ಹಡಗಲಿ ವಂದಿಸಿದರು.