

ಅರಕಲಗೂಡು: ನೈತಿಕತೆ ಇಲ್ಲದ ವಿದ್ಯೆ ದೇಶಕ್ಕೆ ಮಾರಕ. ಹೀಗಾಗಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡುವುದು ಆದ್ಯ ಕರ್ತವ್ಯವಾಗಬೇಕು ಎಂದು ಮೈಸೂರು ಉರಿಲಿಂಗಿ ಪೆದ್ದಿ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಎಸ್ಸಿ, ಎಸ್ಟಿ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ, ರಾಜ್ಯ ಸರ್ಕಾರಿ ಸಮನ್ವಯ ಸಮಿತಿ ಹಾಗೂ ದಲಿತ ನೌಕರರ ಒಕ್ಕೂಟದ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಶಿಕ್ಷಣ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗಬೇಕು. ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಗಳು ಮನೆ ಮನೆ ತಲುಪಬೇಕು. ನಾವೆರಲ್ಲೂ ಒಂದೇ ಎನ್ನುವ ಸಂದೇಶ ಮೈಗೂಡಿಸಿಕೊಳ್ಳಬೇಕು ಎಂದರು.
ಶಾಸಕ ಎ.ಮಂಜು ಮಾತನಾಡಿ, ವಿದ್ಯೆ ಸಮಾಜದ ಬದಲಾವಣೆಗೆ ಕಾರಣವಾಗಿದ್ದು, ಎಲ್ಲ ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ, ತಾಲೂಕು ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜು, ಚನ್ನಕೇಶವ, ಮೂರ್ತಿ, ಮಂಜಯ್ಯ, ಮೋಹನ್, ನಂದಕುಮಾರ್, ಶಿವಣ್ಣ, ಡಾ. ಪುಷ್ಪಲತ ಇತರರಿದ್ದರು.