ಸೂಕ್ಷ್ಮಪ್ರದೇಶವಾದ ತಲಪಾಡಿ

thalapady
Published on

ವೇಣುವಿನೋದ್ ಕೆ.ಎಸ್.ಮಂಗಳೂರು

ಕೇರಳ-ಕರ್ನಾಟಕದ ಗಡಿಭಾಗ ತಲಪಾಡಿ ಈಗ ಅತೀಸೂಕ್ಷ್ಮ ಪ್ರದೇಶವಾಗಿ ಪರಿವರ್ತಿತವಾಗಿದೆ.

ಕೇರಳದ ಗಂಭೀರ ಪ್ರಕರಣಗಳು ಮಂಗಳೂರಿನ ಆಸ್ಪತ್ರೆಗೆ ಬರಲು ಅನುವು ಮಾಡಿಕೊಡಲಾಗಿದ್ದರೂ, ರೋಗಿಗಳು ಬರುವುದು ಕಡಿಮೆಯಾಗಿದೆ. ಆದರೆ, ಗಡಿಯಲ್ಲಿ ಆಚಿಂದೀಚೆಗೆ ಓಡಾಡುವವರ ನಿಯಂತ್ರಣಕ್ಕೆ ಪೊಲೀಸರು, ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಒಂದೆಡೆ ಎರಡೂ ರಾಜ್ಯಗಳ ನಡುವೆ ಸಂಚರಿಸುವ ಸರಕು ಸಾಗಾಟ ವಾಹನಗಳ ಮೇಲೆ ನಿಗಾ ಇರಿಸುವುದು, ಇನ್ನೊಂದೆಡೆ ಕಣ್ಣು ತಪ್ಪಿಸಿ ಥಟ್ಟಂತೆ ಹೋಗುವ, ಬರುವವರನ್ನು ಹಿಡಿದು ವಿಚಾರಿಸುವುದು, ಪರೀಕ್ಷೆ ಮಾಡುವುದು ಸದ್ಯ ಕ್ಲಿಷ್ಟಕರ ಚಟುವಟಿಕೆಗಳು. ಗಡಿ ಭಾಗದ ಚಟುವಟಿಕೆ ಬಗ್ಗೆ ವಿಜಯವಾಣಿ ರಿಯಾಲಿಟಿ ಚೆಕ್ ನಡೆಸಿದಾಗ ಕಂಡು ಬಂದ ಅಂಶಗಳಿವು.

ನೆರೆಯ ಜಿಲ್ಲೆ ಕಾಸರಗೋಡಿನಲ್ಲಿ 100ರಷ್ಟು ಕರೊನಾ ಪಾಸಿಟಿವ್ ರೋಗಿಗಳಿದ್ದ ಕಾರಣಕ್ಕೆ 20 ದಿನಗಳಿಂದ ಗಡಿ ಬ್ಲಾಕ್ ಮಾಡಲಾಗಿದೆ. ಕಾಸರಗೋಡಿನ ಸಂಸದರು ಕೋರ್ಟ್ ಮೆಟ್ಟಿಲೇರಿದ ಪರಿಣಾಮ ನಿಯಮದಲ್ಲಿ ಒಂದಷ್ಟು ಬದಲಾವಣೆಯಾಗಿದ್ದು, ಸದ್ಯ ಕೇರಳದಿಂದ ಕೊವಿಡ್ ಅಲ್ಲದ ರೋಗಿಗಳನ್ನಷ್ಟೇ ವೈದ್ಯಾಧಿಕಾರಿಗಳ ಪ್ರಮಾಣಪತ್ರದೊಂದಿಗೆ ಆಂಬುಲೆನ್ಸ್‌ನಲ್ಲಿ ಕರ್ನಾಟಕಕ್ಕೆ ಬರಲು ಅವಕಾಶ.

ಕೇರಳದ ರೋಗಿಗಳ ಸಂಖ್ಯೆ ಇಳಿಕೆ

ಮಾ.21ರಂದು ಲಾಕ್‌ಡೌನ್ ಘೋಷಣೆ ಬಳಿಕ ಕಾಸರಗೋಡಿನಿಂದ ಕರ್ನಾಟಕಕ್ಕೆ ಬರಲು ಆ ಭಾಗದಿಂದ ಸಾಕಷ್ಟು ಒತ್ತಡ ಹೇರಲಾಗುತ್ತಿತ್ತು. ಆದರೆ ಅಚ್ಚರಿ ಎಂದರೆ ಏ.7ರಂದು ಗಂಭೀರ ಸ್ಥಿತಿ ಇರುವ ರೋಗಿಗಳು ಮಂಗಳೂರಿಗೆ ಬರಬಹುದು ಎಂಬ ಕೋರ್ಟ್ ನಿರ್ದೇಶನದ ಬಳಿಕ ಈವರೆಗೆ 7 ರೋಗಿಗಳಷ್ಟೇ ಬಂದಿದ್ದಾರೆ, ಅವರಲ್ಲಿ ಇಬ್ಬರು ಮಾತ್ರ ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಉಳಿದವರು ಹಿಂದಿರುಗಿದ್ದಾರೆ. ಮಂಗಳವಾರ ಬೆಳಗ್ಗೆ ಖಾಸಗಿ ಕಾರಿನಲ್ಲಿ ಕ್ಯಾನ್ಸರ್‌ಪೀಡಿತ ಮಹಿಳೆಯೊಬ್ಬರನ್ನು ಅವರ ಪತಿ ಕರೆದುಕೊಂಡು ಬಂದಿದ್ದರು. ಅವರಲ್ಲಿ ವೈದ್ಯಕೀಯ ಪ್ರಮಾಣಪತ್ರ ಇರಲಿಲ್ಲ, ಆಂಬುಲೆನ್ಸ್‌ನಲ್ಲೂ ಬರಲಿಲ್ಲ, ಹಾಗಾಗಿ ಅವರನ್ನು ವಾಪಸ್ ಕಳುಹಿಸಲಾಗಿದೆ. ಕಳೆದ ಕೆಲ ದಿನಗಳಿಂದ ಕಾಸರಗೋಡು ಕಡೆಯಿಂದ ಬರುವ ರೋಗಿಗಳ ಪ್ರಮಾಣ ಕಡಿಮೆಯಾಗಿದೆ ಎಂದು ತಲಪಾಡಿಯಲ್ಲಿ ಕರ್ತವ್ಯನಿರತ ಆರೋಗ್ಯ ಇಲಾಖೆ ಸಿಬ್ಬಂದಿ ವಿಜಯವಾಣಿಗೆ ತಿಳಿಸಿದರು.

ಸುವ್ಯವಸ್ಥಿತ ಚೆಕ್‌ಪೋಸ್ಟ್

ತಲಪಾಡಿಯಲ್ಲಿ ನಾಲ್ಕು ಪ್ರತ್ಯೇಕ ಶೆಡ್ ಹಾಕಿ ಕರ್ನಾಟಕದ ಪೊಲೀಸ್ ತಂಡ ಕಾರ್ಯನಿರ್ವಹಿಸುತ್ತಿದೆ. ಟ್ರಾಫಿಕ್ ಹಾಗೂ ಸಿವಿಲ್ ಪೊಲೀಸರು ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇರಳ ಕಡೆಯಿಂದ ಆಗಮಿಸುವ ವಾಹನಗಳನ್ನು ನಿಲ್ಲಿಸಿ ಅದರಲ್ಲಿರುವವರನ್ನು ವೈದ್ಯಕೀಯ ಸಿಬ್ಬಂದಿ ತಪಾಸಣೆ ನಡೆಸಿಯೇ ಕರ್ನಾಟಕ ಕಡೆಗೆ ಬಿಡುತ್ತಾರೆ. ಸರಾಸರಿ ದಿನಕ್ಕೆ 300ರಿಂದ 500 ಗೂಡ್ಸ್ ವಾಹನಗಳು ಸಂಚರಿಸುತ್ತಿವೆ. ಸಿಸಿಟಿವಿ ಕ್ಯಾಮರಾ, ಮೈಕ್ ಅನೌನ್ಸ್‌ಮೆಂಟ್ ವ್ಯವಸ್ಥೆಯನ್ನೂ ಮಾಡಲಾಗಿದೆ. 15ರಷ್ಟು ಪೊಲೀಸರು, ಇಬ್ಬರು ವೈದ್ಯಕೀಯ ಸಿಬ್ಬಂದಿ ಅಲ್ಲದೆ ಸೇಲ್ಸ್ ಟ್ಯಾಕ್ಸ್‌ನವರೂ ಇಲ್ಲಿದ್ದಾರೆ.

ನುಸುಳಲು ಹರಸಾಹಸ

ಕೇರಳ ಹಾಗೂ ಕರ್ನಾಟಕ ಮಧ್ಯೆ ಹಲವು ಕಾರಣ ನೀಡಿ ನುಸುಳಲು ಜನ ಬರುತ್ತಾರೆ, ಪೊಲೀಸರ ಮುಂದೆ ಕಾರಣ ಕೊಡುತ್ತಾರೆ. ನೇರವಾಗಿ ಬರುವವರ ಸಂಖ್ಯೆ ಈಗ ಕೆಲದಿನಗಳಿಂದ ಕಡಿಮೆಯಾಗುತ್ತಿದೆ. ಆದರೆ ಕೆಲವರು ಒಳದಾರಿಗಳಲ್ಲಿ, ರೈಲ್ವೆ ಹಳಿಯ ಮೂಲಕ ಬರಲು ಮುಂದಾಗಿದ್ದಾರೆ, ಅಲ್ಲಿಯೂ ನಿಗಾ ಇರಿಸಿದ್ದೇವೆ ಎಂದು ಉಳ್ಳಾಲ ಇನ್‌ಸ್ಪೆಕ್ಟರ್ ಅನಿಲ್ ಕುಮಾರ್ ತಿಳಿಸಿದ್ದಾರೆ.

ಗಡಿ ದಾಟಲು ನೂರೆಂಟು ಕಾರಣ

ಆಹಾರವಸ್ತು ಸಾಗಿಸುವುದು, ಗಡಿಯಾಚೆ ಮನೆ ಇರುವುದು, ಪೆಟ್ರೋಲ್ ಬಂಕ್‌ಗೆ ತೆರಳುವುದು, ಅಂಗಡಿಗೆ ಹೋಗುವುದು...ಹೀಗೆ ಒಂದಿಲ್ಲೊಂದು ನೆಪ ಮಾಡಿಕೊಂಡು ಜನ ಓಡಾಡುತ್ತಲೇ ಇರುತ್ತಾರೆ. ಮಂಗಳವಾರವೂ ಮಂಗಳೂರು ಕಡೆಯ ಯುವಕನೊಬ್ಬ ಬೈಕ್‌ನಲ್ಲಿ ಗಡಿ ದಾಟಲು ಹೋದಾಗ ಪೊಲೀಸರು ಆಚೆ ಹೋದರೆ ಮತ್ತೆ ಬರುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಅರ್ಧಗಂಟೆಯಲ್ಲಿ ಪತ್ನಿ, ಬ್ಯಾಗ್ ಜೊತೆ ಅದೇ ಯುವಕ ಮತ್ತೆ ಪ್ರತ್ಯಕ್ಷ! ಪುನಃ ಮಂಗಳೂರಿಗೆ ಹೋಗಬೇಕು ಎಂದು ಹಲವು ಕಾರಣ ನೀಡಿದ್ದಾನೆ. ಪೊಲೀಸರು ಎಚ್ಚರಿಕೆ ನೀಡಿ ಹಿಂದೆ ಕಳುಹಿಸಿದ್ದಾರೆ.

ವೆನ್ಲಾಕ್ ಸಿಬ್ಬಂದಿ ಬರೋದು ಬೇಡ!

ವೆನ್ಲಾಕ್‌ನ ವೈದ್ಯರ-ಸಿಬ್ಬಂದಿಯ ತಂಡ ಬಸ್‌ನಲ್ಲಿ ಯಾವಾಗಲೂ ಬರುತ್ತಿತ್ತು. ನಮ್ಮ ಕಡೆಯ ವೈದ್ಯರನ್ನು ನಿಮ್ಮ ಕಡೆಗೆ ಬಿಡುತ್ತಿಲ್ಲ, ಹಾಗಾಗಿ ವೆನ್ಲಾಕ್‌ನವರು ಇನ್ನು ಮುಂದೆ ಬರುವುದು ಬೇಡ ಎಂದು ಕೇರಳ ಕಡೆಯಿಂದ ಪೊಲೀಸರ ತಂಡ ಕರ್ನಾಟಕದ ಪೊಲೀಸರಿಗೆ ತಿಳಿಸಿದೆ. ಕೇರಳದ ಎಸ್‌ಐಯೊಬ್ಬರು ಈ ಮಾಹಿತಿ ತಿಳಿಸಿ ತೆರಳಿದ್ದಾರೆ. ಇದೊಂದು ಪ್ರತೀಕಾರದ ಕ್ರಮದಂತೆ ತೋರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net