ಹೆದ್ದಾರಿ ಅಧಿಕಾರಿಗಳ ನಿರಂತರ ಗೈರು ವಿರುದ್ಧ ಗ್ರಾಮಸ್ಥರ ಆಕ್ರೋಶ: ತಲಪಾಡಿ ಗ್ರಾಮಸಭೆ ರದ್ದು!

grama sabhe
ತಲಪಾಡಿ ಗ್ರಾಮಸಭೆಯಲ್ಲಿ ಪಿಡಿಒ ಕೇಶವ ಪೂಜಾರಿ ಮಾಹಿತಿ ನೀಡಿದರು.ಅಧ್ಯಕ್ಷ ಇಸ್ಮಾಯಿಲ್, ನೋಡಲ್ ಅಧಿಕಾರಿ ನಾಗರಾಜ್ ಎಂ. ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಳೆದ ಏಳು ವರ್ಷಗಳಿಂದ ಯಾವುದೇ ಗ್ರಾಮಸಭೆಯಲ್ಲಿ ಭಾಗವಹಿಸದೆ ಬೇಜವಾಬ್ದಾರಿ ತೋರಿದ್ದಾರೆಂದು ಆರೋಪಿಸಿದ ಗ್ರಾಮಸ್ಥರು ದಾಖಲೆ ಪುಸ್ತಕಕ್ಕೆ ಸಹಿ ಹಾಕಲು ನಿರಾಕರಿಸಿ ಗ್ರಾಮಸಭೆಯನ್ನೇ ರದ್ದುಪಡಿಸುವಂತೆ ಮಾಡಿದ ಘಟನೆ ತಲಪಾಡಿಯಲ್ಲಿ ನಡೆದಿದೆ.

ತಲಪಾಡಿ ಗ್ರಾಮ ಪಂಚಾಯಿತಿಯ ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಗುರುವಾರ ಆಯೋಜಿಸಲಾಗಿತ್ತು.

ಬೆಳಗ್ಗೆ 10.30ಕ್ಕೆ ಸಭೆ ನಿಗದಿಪಡಿಸಲಾಗಿದ್ದು, ಪಂಚಾಯಿತಿ ಅಧ್ಯಕ್ಷರು ಮತ್ತು ನಾಲ್ವರು ಸದಸ್ಯರು ಮಾತ್ರ ಉಪಸ್ಥಿತರಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು. ಎಲ್ಲ ಸದಸ್ಯರಿಗೆ ಸಭೆಯ ಬಗ್ಗೆ ಮಾಹಿತಿ ಇದೆ. ಅಧಿಕಾರಿಗಳು, ಸದಸ್ಯರಿಗೆ ಪತ್ರ ಕಳಿಸಲಾಗಿದ್ದು ಪ್ರಚಾರವನ್ನೂ ಮಾಡಲಾಗಿದೆ ಎಂದು ಪಿಡಿಒ ಕೇಶವ ಪೂಜಾರಿ ತಿಳಿಸಿದರು.

ಗ್ರಾಮದಲ್ಲಿ 8,522 ಮತದಾರರಿದ್ದು ಕನಿಷ್ಠ 100 ಜನ ಇದ್ದರೆ ಸಭೆ ಆರಂಭಿಸಬಹುದು. ಸದಸ್ಯರು ಇಲ್ಲ ಎನ್ನುವ ಕಾರಣ ನೀಡುವಂತಿಲ್ಲ. ಮೂರು ವರ್ಷ ಆರು ಗ್ರಾಮಸಭೆ ನಡೆದಿದ್ದು ನಾನು ಮತ್ತು ಅಧ್ಯಕ್ಷರು ಸ್ವತಃ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿಯಾಗಿ ಗ್ರಾಮಸಭೆಯಲ್ಲಿ ಭಾಗವಹಿಸುವಂತೆ ಲಿಖಿತ ಮನವಿ ಮಾಡಿದ್ದೇವೆ. ಬುಧವಾರವೂ ಮಾತನಾಡಿದ್ದೇನೆ ಎಂದು ಪಿಡಿಒ ಮಾಹಿತಿ ನೀಡಿದರು.

ಸಭೆಯ ನಿಗದಿತ ಸಮಯಕ್ಕಿಂತ 30 ನಿಮಿಷ ಬಳಿಕ ಒಬ್ಬೊಬ್ಬರೇ ಸದಸ್ಯರು ಬಂದಿದ್ದು ಕೊನೆಗೆ 24 ಸದಸ್ಯರ ಪೈಕಿ 14 ಮಂದಿ ಭಾಗವಹಿಸಿದ್ದರು. ಗ್ರಾಮಸ್ಥ ದಯಾನಂದ ಪಿಲಿಕೂರು ಮಾತನಾಡಿ, ಹತ್ತು ಸದಸ್ಯರು ಗೈರಾಗಿದ್ದಾರೆ. ಇಲ್ಲಿ ನಿರ್ಣಯ ಆಗುವ ಯೋಜನೆಗಳು ರಾಜಕಾರಣಿಗಳ ಒತ್ತಡದಿಂದ ಕಾರ್ಯಗತ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟು ಬಿಡದ ಗ್ರಾಮಸ್ಥರು!

ರಾಷ್ಟ್ರೀಯ ಹೆದ್ದಾರಿ ಅತ್ಯಂತ ಅಪಾಯಕಾರಿಯಾಗಿದ್ದು ತಲಪಾಡಿಯಲ್ಲಿ ನಿರಂತರ ಅಪಘಾತಗಳು ನಡೆಯುತ್ತಿವೆ. ಆದರೂ ಹೆದ್ದಾರಿ ಪ್ರಾಧಿಕಾರದ ಯಾವುದೇ ಅಧಿಕಾರಿಗಳು 2017ರಿಂದ ಇದುವರೆಗೆ ಒಂದೇ ಒಂದು ಗ್ರಾಮಸಭೆಗೆ ಆಗಮಿಸಿಲ್ಲ. ಗ್ರಾಮಸ್ಥರು ಇಲಾಖೆಯ ಕಚೇರಿಗೆ ಹೋದರೆ ಉಡಾಫೆಯಿಂದ ಮಾತನಾಡುತ್ತಾರೆ. ನಮಗೆ ಟೋಲ್ ಗೇಟ್‌ನಿಂದಲೂ ಅನ್ಯಾಯ ಆಗುತ್ತಿದ್ದು, ಈ ಬಗ್ಗೆ ಇಂದು ಮಾದರಿ ನಿರ್ಣಯ ಕೈಗೊಳ್ಳಬೇಕಾಗಿದೆ. ನಾವ್ಯಾರು ದಾಖಲೆ ಪುಸ್ತಕಕ್ಕೆ ಸಹಿ ಹಾಕದೆ ಇಂದಿನ ಗ್ರಾಮಸಭೆ ಬಹಿಷ್ಕರಿಸುತ್ತೇವೆ. ಮುಂದೆ ಗ್ರಾಮಸಭೆಗೆ ಯಾವುದೇ ಅಧಿಕಾರಿಗಳು ಗೈರಾಗಬಾರದು. ಇದುವರೆಗೆ ಅಧಿಕಾರಿಗಳು ಗ್ರಾಮಸ್ಥರನ್ನು ವಂಚಿಸಿದ್ದು ಸಾಕು ಎಂದು ಗ್ರಾಮಸ್ಥ ಖಲೀಲ್ ತಿಳಿಸಿದಾಗ ಪಿಡಿಒ ಮತ್ತು ಅಧ್ಯಕ್ಷರು ಸಾಕಷ್ಟು ಸಮಜಾಯಿಷಿ ನೀಡಿದರು. ಯಶು ಪಕ್ಕಳ, ಅಬ್ಬಾಸ್ ಉಚ್ಚಿಲ್, ವಾಣಿ, ಸೋಶಿಯಲ್ ಫಾರೂಕ್, ಸಂಶುದ್ದೀನ್ ಉಚ್ಚಿಲ್ ಧ್ವನಿಗೂಡಿಸಿ, ಹಿಂದೆಯೂ ಹೀಗೇ ಆಗಿದ್ದಾಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಗ್ರಾಮಸ್ಥರು ಒಗ್ಗಟ್ಟು ಕಾಪಾಡಿ ಸಭೆ ರದ್ದುಪಡಿಸುವ ತೀರ್ಮಾನಕ್ಕೆ ಬಂದು ಇದಕ್ಕೆಲ್ಲ ಎನ್.ಎಚ್. ಅಧಿಕಾರಿಗಳೇ ಕಾರಣ ಎಂದು ದೂರಿದರು.

ಪಿಡಿಒ, ನೋಡಲ್ ಅಧಿಕಾರಿ, ಅಧ್ಯಕ್ಷರ ಯಾವುದೇ ಮನವಿಗೂ ಗ್ರಾಮಸ್ಥರು ಒಪ್ಪುವ ಲಕ್ಷಣಗಳು ಗೋಚರಿಸದ ಕಾರಣ ಮಧ್ಯಾಹ್ನ 12.30ರ ಹೊತ್ತಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಿಂದ ನಿರ್ಗಮಿಸಿದರು. ಈ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಗೊಳಿಸಿದ ತೀರ್ಮಾನ ದಾಖಲಿಸಿದ ಪಿಡಿಒ ಅದನ್ನು ಓದಿ ಹೇಳಿದರು.

ಅಧ್ಯಕ್ಷರೇ ರಾಜೀನಾಮೆ ನೀಡಲಿ!

ಗ್ರಾಮಸ್ಥರ ಪರವಾಗಿ ನಿಲ್ಲದೆ ಅಧಿಕಾರಿಗಳ ಪರವಾಗಿ ನಿಂತ ನೀವು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂದು ಅಬ್ಬಾಸ್ ಉಚ್ಚಿಲ್ ಆಗ್ರಹಿಸಿದ್ದು ಸಂಶುದ್ದೀನ್ ಸಹಿತ ಇತರರು ಧ್ವನಿಗೂಡಿಸಿದರು. ನೋಡಲ್ ಅಧಿಕಾರಿ ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಎಂ., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮೆಸ್ಕಾಂ, ಜೆಜೆಎಂ, ಪಶು ಸಂಗೋಪಣೆ ಇಲಾಖೆಯ ಅಧಿಕಾರಿಗಳು ಈ ಬೆಳವಣಿಗಗಳಿಗೆ ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net