

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಮಜಗದ್ಗುರು ಶಂಕರಾಚಾರ್ಯ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆಶಯದಲ್ಲಿ ಯಕ್ಷ ಶಾಲ್ಮಲಾ ಅಂಗಸಂಸ್ಥೆಯಡಿ ಮಕ್ಕಳಿಗೆ ಸೆ. 23 ಹಾಗೂ 24ರಂದು ಭಾಷಾಶುದ್ಧಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಬಲ್ಲ ತಾಳಮದ್ದಲೆ ಸ್ಪರ್ಧೆ ಏರ್ಪಡಿಸಲಾಗಿದೆ.
ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. 7ನೇ ತರಗತಿಯವರೆಗೆ ಕಿರಿಯರ ವಿಭಾಗ ಹಾಗೂ 8 ರಿಂದ 10ನೇ ತರಗತಿಯವರೆಗೆ ಹಿರಿಯರ ವಿಭಾಗದಲ್ಲಿ ಆಯೋಜಿಸಲಾಗಿದೆ. ತಾಳಮದ್ದಲೆಯ ಅವಧಿ 30 ನಿಮಿಷಗಳಾಗಿದ್ದು, ತಂಡದಲ್ಲಿ ಕನಿಷ್ಠ 3 ಮತ್ತು ಗರಿಷ್ಠ 6 ವಿದ್ಯಾರ್ಥಿಗಳಿರಬೇಕು. ಪೌರಾಣಿಕ ಪ್ರಸಂಗಗಳನ್ನೇ ಆಧರಿಸಿರಬೇಕು. ಕವಿಗಳ ಹೆಸರನ್ನು ಉಲ್ಲೇಖಿಸಬೇಕು. ಒಂದೇ ಶಾಲೆಯಿಂದ ಬರುವ ತಂಡಗಳ ಸಂಖ್ಯಾಮಿತಿ ಇಲ್ಲ ಎಂದು ತಿಳಿಸಿದ್ದಾರೆ. ಒಬ್ಬ ವಿದ್ಯಾರ್ಥಿಗೆ ಒಂದು ತಂಡದಲ್ಲಿ ಮಾತ್ರ ಅವಕಾಶ ನೀಡಲಾಗಿದೆ.
ತಂಡಗಳಿಗೆ ಅವಶ್ಯಕತೆ ಇದ್ದಲ್ಲಿ ಹಿಮ್ಮೇಳವನ್ನು ಒದಗಿಸಲಾಗುತ್ತಿದೆ. ಆದರೆ, ಹಿಮ್ಮೇಳಕ್ಕೆ ಅಂಕವಿಲ್ಲ. ಸ್ಪರ್ಧೆಯಲ್ಲಿ ಅರ್ಥಧಾರಿಗಳ ಶೈಲಿ, ಶ್ರುತಿ ಬದ್ಧತೆ, ಸಾಹಿತ್ಯ ಶುದ್ಧಿ, ಭಾವ ಮತ್ತು ಪ್ರಭಾವ ಈ ಅಂಶಗಳನ್ನು ಪರಿಗಣಿಸಲಾಗುತ್ತಿದ್ದು, ಸ್ಪರ್ಧೆಗೆ ಸಂಬಂಧಿಸಿದಂತೆ ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದೆ. ತಂಡಗಳಿಗೆ ಬಸ್ ಪ್ರಯಾಣ ವೆಚ್ಚ ನೀಡಲಾಗುವುದು.
ಭಾಗವಹಿಸುವ ಶಾಲಾ ವಿವರಗಳ ನೋಂದಣಿಯನ್ನು ಸೆ. 13ರೊಳಗೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಬರುವಾಗ ಆಧಾರ್ ಕಾರ್ಡ್ ನಕಲು ಪ್ರತಿ ಕಡ್ಡಾಯವಾಗಿ ತರಬೇಕು. ನೋಂದಣಿ ಮತ್ತು ಮಾಹಿತಿಗಾಗಿ ನಾಗರಾಜ ಜೋಶಿ ಸೋಂದಾ, ಗಜಾನನ ಭಟ್ಟ ತುಳಗೇರಿ, ಸದಾಶಿವ ಮಲವಳ್ಳಿ , ಭಾಸ್ಕರ ಗಾಂವ್ಕರ ಬಿದ್ರೆಮನೆ , ಅನಂತ ಹೆಗಡೆ ದಂತಳಿಕೆ ಅವರನ್ನು ಸಂಪರ್ಕಿಸಬಹುದು ಎಂದು ಯಕ್ಷ ಶಾಲ್ಮಲಾದ ಕಾರ್ಯದರ್ಶಿ ನಾಗರಾಜ ಜೋಶಿ ಸೋಂದಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.