ಕಾವೇರಿ ಜಾತ್ರೆ ವ್ಯವಸ್ಥಿತವಾಗಿ ಆಯೋಜಿಸಲು ಉಸ್ತುವಾರಿ ಸಚಿವರ ಕಟ್ಟುನಿಟ್ಟಿನ ಸೂಚನೆ

16mdks6 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿ ಕ್ಷೇತ್ರದಲ್ಲಿನ ಕಾವೇರಿ ಜಾತ್ರೆ ಕುರಿತು ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಅಧ್ಯಕ್ಷತೆಯಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು. ಜಾತ್ರೆಗೆ ಸಂಬಂಧಿಸಿದ್ದಂತೆ ಹಲವು ಮಹತ್ವದ ಚರ್ಚೆ ನಡೆಯಿತು.

ತಲಕಾವೇರಿ ಕ್ಷೇತ್ರಕ್ಕೆ ಭಕ್ತರು ಬರುವ ವಿವಿಧ ಮಾರ್ಗದಲ್ಲಿರುವ ರಸ್ತೆ ಗುಂಡಿ ಮುಚ್ಚಬೇಕೆಂದು ಲೋಕೋಪಯೋಗಿ ಇಲಾಖಾಧಿಕಾರಿಗೆ ಸೂಚನೆ ನೀಡಲಾಯಿತು. ರಸ್ತೆ ಬದಿಯಲ್ಲಿರುವ ಮರದ ರೆಂಬೆಗಳನ್ನು ತೆರವುಗೊಳಿಸುವುದ, ರಸ್ತೆ ಬದಿಯಲ್ಲಿರುವ ಕಾಡು ಕಡಿಯುವುದರ ಮೂಲಕ ಸುಗಮ ಸಂಚಾರಕ್ಕೆ ಅನು ಮಾಡಿಕೊಡಬೇಕೆಂದು ಶಾಸಕರು ಸೂಚನೆ ನೀಡಿದರು. ಲೋಕೋಪಯೋಗಿ ಇಲಾಖೆಯವರು ಸಕಾಲದಲ್ಲಿ ಕೆಲಸ ಮಾಡುವುದಿಲ್ಲ ಎಂದು ತಲಕಾವೇರಿ- ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಅಪ್ಪಚಟ್ಟೋಳಂಡ ಮನು ಮುತ್ತಪ್ಪ ಆಕ್ಷೇಪ ವ್ಯಕ್ತ ಪಡಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷ ಭಕ್ತರಿಗೆ ನಿಬರ್ಂಧ ವಿಧಿಸಲಾಗಿತ್ತು. ಈ ವರ್ಷ ಯಾವ ನಿಬರ್ಂಧವೂ ಇಲ್ಲದೆ ಭಕ್ತರಿಗೆ ಮುಕ್ತ ಅವಕಾಶ ನೀಡಲಾಗುವುದೆಂದು ಶಾಸಕದ್ವಯರು ಹೇಳಿದರು. ಸಂಚಾರ ನಿಯಂತ್ರಣ ಕ್ರಮ ಮಾತ್ರ ತೆಗೆದುಕೊಳ್ಳಲಾಗುವುದೆಂದು ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಹೇಳಿದರು.

ತಲಕಾವೇರಿ, ಭಾಗಮಂಡಲದಲ್ಲಿ ವಾಹನ ನಿಲುಗಡೆಗೆ ಕಷ್ಟವಾಗುತ್ತದೆ. ಇದಕ್ಕೆ ಪರ್ಯಾಯ ವ್ಯವಸ್ಥೆಗಳತ್ತ ಗಮನ ಹರಿಸಬೇಕು. ಶಾಲಾ ಮೈದಾನದಲ್ಲಿ ವಾಹನ ನಿಲುಗಡೆ ಮಾಡಿ, ಅಲ್ಲಿಂದ ಸರ್ಕಾರಿ ಬಸ್ಸಿನಲ್ಲಿ ಕ್ಷೇತ್ರಕ್ಕೆ ತೆರಳುವ ವ್ಯವಸ್ಥೆ ಮಾಡುವುದು ಸೂಕ್ತ ಎಂದು ಭಾಗಮಂಡಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್‌ಕುಮಾರ್ ಜೋಯಪ್ಪ ಹೇಳಿದರು.

ಲ್ಯಾಂಡ್ ಆರ್ಮಿ ಸ್ವಾಧೀನದಲ್ಲಿದ್ದ ೫ ಎಕರೆ ಜಾಗವನ್ನು ದೇವಾಲಯ ವ್ಯವಸ್ಥಾಪನಾ ಸಮಿತಿ ಹೆಸರಿಗೆ ಮಾಡಲಾಗಿದೆ. ಈ ಜಾಗದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕೆಂದು ಮನು ಮುತ್ತಪ್ಪ ಸಲಹೆ ನೀಡಿದರು. ವನ್ಯಜೀವಿ ಪ್ರದೇಶ ಆಗಿರುವುದರಿಂದ ಕಾಮಗಾರಿಗೆ ಅಡ್ಡಿಯಾಗುವ ಕಳವಳವನ್ನು ಶಾಸಕ ಕೆ.ಜಿ. ಬೋಪಯ್ಯ, ಭಾಗಮಂಡಲ ಗ್ರಾಪಂ ಉಪಾಧ್ಯಕ್ಷ ಸತೀಶ್‌ಕುಮಾರ್ ವ್ಯಕ್ತ ಪಡಿಸಿದರು.

ಸ್ನಾನಕ್ಕೆ ಅವಕಾಶ
ತಲಕಾವೇರಿಯ ಸ್ನಾನಕೊಳದಲ್ಲಿ ಭಕ್ತರ ಸ್ನಾನಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಸಭೆಯಲ್ಲಿ ಪರ- ವಿರುದ್ಧವಾದ ಅಭಿಪ್ರಾಯ ವ್ಯಕ್ತ ವಾಯಿತು. ಸ್ನಾನ ಮಾಡಲು ಅವಕಾಶ ನೀಡಬೇಕೆಂಬು ಕೆಲವರು ಮನವಿ ನೀಡಿದ್ದಾರೆಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಸಭೆ ಗಮನಕ್ಕೆ ತಂದರು.

ಸ್ನಾನಕ್ಕೆ ಅವಕಾಶ ಮಾಡಿಕೊಡುವುದರಿಂದ ತೊಂದರೆಯಾಗಲಿದೆ ಎಂಬ ಅಭಿಪ್ರಾಯವನ್ನು ಸಭೆಯಲ್ಲಿದ್ದ ಹಲವರು ವ್ಯಕ್ತ ಪಡಿಸಿದರು. ಈ ಹಿಂದಿನಂತೆ ಕಾವೇರಿ ತೀರ್ಥೋದ್ಭವ ಬಳಿಕ ಭಕ್ತರ ಸ್ನಾನಕ್ಕೆ ಅವಕಾಶ ಮಾಡಿಕೊಡಬಹುದೆಂಬ ಅಭಿಪ್ರಾಯ ವ್ಯಕ್ತವಾಂಉ. ಸ್ನಾನಕ್ಕೆ ಅವಕಾಶ ನೀಡಬೇಕೆಂಬ ಅಭಿಪ್ರಾಯವನ್ನು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ವ್ಯಕ್ತ ಪಡಿಸಿದರು. ಸ್ನಾನ ಮಾಡುವ ವಿಚಾರಕ್ಕೆ ಸಂಬಂಧಿಸಿದ್ದಂತೆ ಮತ್ತೊಮ್ಮೆ ಪ್ರಮುಖರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಉಸ್ತುವಾರಿ ಸಚಿವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net