

ಮಡಿಕೇರಿ
ಕಾವೇರಿ ನದಿ ಉಗಮ ಸ್ಥಾನ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲ ಕೊಡವರ ಪವಿತ್ರ ಸ್ಥಳಗಳು. ಕೊಡಗಿನವರೆಲ್ಲಾ ಈ ಎರಡೂ ಸ್ಥಳಗಳನ್ನು ಧಾರ್ಮಿಕ ಭಾವನೆಯಿಂದಲೇ ನೋಡುತ್ತಾರೆ. ಈ ಎರಡು ಕ್ಷೇತ್ರಗಳಿಗೆ ತೆರಳಬೇಕಾದರೆ ಅದರದ್ದೇ ಆದ ಕಟ್ಟು ಪಾಡುಗಳಿವೆ. ಸ್ಥಳೀಯರು ಇದನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ರೂಢಿಗತ ಪರಂಪರೆಯನ್ನು ಯಾವುದೇ ತೊಂದರೆ ಇಲ್ಲದೆ ಅನುಸರಿಸಿಕೊಂಡು ಬರಲಾಗುತ್ತಿದೆ. ಈ ಎರಡೂ ಕ್ಷೇತ್ರಗಳನ್ನು ಕೊಡಗಿನ ಪ್ರವಾಸೋದ್ಯಮ ತಾಣಗಳ ಪಟ್ಟಿಯಲ್ಲಿ ಸೇರಿಸಿರುವುದರಿಂದ ಈಗ ಸಮಸ್ಯೆ ಕಾಣಿಸಿಕೊಂಡಿದೆ.
ಕೊಡಗಿಗೆ ಬರುವ ಬಹುತೇಕ ಪ್ರವಾಸಿಗರು ಮೋಜು, ಮಸ್ತಿ ಮಾಡಲೆಂದೇ ಆಗಮಿಸುತ್ತಾರೆ. ಭಾಗಮಂಡಲ ಮತ್ತು ತಲಕಾವೇರಿಗೆ ಆಗಮಿಸುವಾಗಲೂ ಅವರು ಇದೇ ಮನಸ್ಥಿತಿಯಲ್ಲಿ ಇರುತ್ತಾರೆ. ಸ್ಥಳೀಯವಾಗಿ ಇರುವ ಕಟ್ಟುಪಾಡುಗಳನ್ನು ಪ್ರವಾಸಿಗರು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಸ್ಥಳೀಯರು ತಿಳಿಸಿ ಹೇಳಿದರೂ ಕೇಳುವ ವ್ಯವಧಾನ ಇರುವುದಿಲ್ಲ. ಪ್ರವಾಸಿಗರ ವರ್ತನೆಗಳು ಇಲ್ಲಿಗೆ ಆಗಮಿಸುವ ಭಕ್ತರ ಮನಸ್ಸಿಗೆ ಘಾಸಿ ಮಾಡುವಂತೆ ಇರುತ್ತದೆ ಎನ್ನುವುದು ಸಾಮಾನ್ಯ ಆರೋಪ.
ಭಾಗಮಂಡಲ ಮತ್ತು ತಲಕಾವೇರಿಯನ್ನು ಪ್ರವಾಸಿತಾಣಗಳ ಪಟ್ಟಿಯಿಂದ ತೆಗೆದು ಧಾರ್ಮಿಕ ಕ್ಷೇತ್ರಗಳನ್ನಾಗಿ ಘೋಷಿಸಬೇಕು ಎನ್ನುವುದು ಭಕ್ತರ ಬಹುದಿನದ ಬೇಡಿಕೆ. ಈ ವಿಷಯದಲ್ಲಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸಕರಾತ್ಮಕವಾಗಿ ಸ್ಪಂದಿಸಿದ್ದು, ಅಗತ್ಯಬಿದ್ದರೆ ಆದೇಶ ಹೊರಡಿಸುವುದಾಗಿಯೂ ಹೇಳಿದ್ದಾರೆ. ಈ ಕೆಲಸ ಆದಷ್ಟು ಬೇಗ ಆಗಲಿ ಎನ್ನುವುದು ಭಕ್ತರ ಆಶಯ. ಈ ಸಂಬಂಧ ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿದೆ.
ತಲಕಾವೇರಿ ಮತ್ತು ಭಾಗಮಂಡಲ ಪ್ರವಾಸೋದ್ಯಮ ಕ್ಷೇತ್ರಗಳಾಗಿ ಇರುವುದಕ್ಕಿಂತ ತೀರ್ಥಕ್ಷೇತ್ರಗಳಾಗಿ ಇರುವುದೇ ಒಳ್ಳೆಯದು. ಮಾತೆ ಕಾವೇರಿಯ ಪವಿತ್ರ ಕ್ಷೇತ್ರಕ್ಕೆ ಪ್ರವಾಸಿಗರು ಬಂದು ಮೋಜು-ಮಸ್ತಿ ಮಾಡಿ ಹೋಗುವುದಕ್ಕಿಂಥ ಅದು ಭಕ್ತಾಧಿಗಳ ಪಾಲಿಗೆ ತೀರ್ಥಕ್ಷೇತ್ರವಾಗಿಯೇ ಉಳಿಯುವುದು ಒಳ್ಳೆಯದು. ಪ್ರವಾಸೋದ್ಯಮ ಕ್ಷೇತ್ರವಾಗಿರುವುದಿಂದ ಕ್ಷೇತ್ರದ ಪಾವಿತ್ರ್ಯತೆ ಹಾಳಾಗುತ್ತಿದೆ. ಬೇರೆ ತೀರ್ಥಕ್ಷೇತ್ರಗಳಲ್ಲಿರುವ ಹಾಗೆ ಇಲ್ಲಿಯೂ ಬರುವ ಭಕ್ತಾಧಿಗಳಿಗೆ ನಿರ್ಬಂಧಗಳು ಇರಬೇಕು. ಕೆಲವರಿಗೆ ಇದು ಪಿಕ್ನಿಕ್ ಜಾಗವಾಗಿದೆ.
ಕುಂಬೇರ ಎ. ಮನುಕುಮಾರ್, ಅಧ್ಯಕ್ಷ, ಕೊಡವ ಸಮಾಜ, ವಿರಾಜಪೇಟೆ
ಎಲ್ಲಾ ಪ್ರವಾಸೋದ್ಯಮ ಕ್ಷೇತ್ರಗಳ ಹಾಗೆ ತಲಕಾವೇರಿಯೂ ಆಗಿ ಹೋಗಿದೆ. ವಸ್ತ್ರಸಂಹಿತೆ ಇಲ್ಲ. ಎಲ್ಲಿ ಬೇಕಲ್ಲಿ ಕಸ ಹಾಕುವುದು, ಹೇಗೆ ಬೇಕೋ ಹಾಗೇ ಬಂದು ಹೋಗುವುದು. ಮನಸೋ ಇಚ್ಛೆ ವರ್ತನೆ ಮಾಡುವುದು ಕಂಡು ಬರುತ್ತಿದೆ. ನಾವೂ ಕಳೆದ ಬಾರಿ ತಲಾಕಾವೇರಿಗೆ ಹೋದಾಗ ಒಂದಷ್ಟು ಹುಡುಗಿಯರು ತುಂಡುಡುಗೆಯಲ್ಲಿ ಅಲ್ಲಿಗೆ ಬಂದಿದ್ದರು. ಆಗ ಅಲ್ಲಿನವರು ಆ ಯುವತಿಯರಿಗೆ ಇದು ಧಾರ್ಮಿಕ ಕ್ಷೇತ್ರ ಇಲ್ಲಿಗೆ ಹೀಗೆ ಬರಬಾರದು ಎಂದು ತಿಳಿಸುವ ಯತ್ನ ಮಾಡಿದರು. ಅವರು ಅದಕ್ಕೆ ಸೊಪ್ಪು ಹಾಕಲಿಲ್ಲ. ಇದು ಪ್ರವಾಸಿ ತಾಣವಾಗಿ ಮಾಡಿರುವುದರಿಂದ ಹೀಗಾಗುತ್ತಿದೆ.
ಮೇರಿಯಂಡ ಗಾಯಿತ್ರಿ ಅರಸು, ನಿರ್ದೇಶಕರು, ಕೊಡವ ಸಮಾಜ, ವಿರಾಜಪೇಟೆ
ಕಾವೇರಿ ಮಾತೆಯನ್ನು ದೈವಸ್ವರೂಪಿಣಿಯಾಗಿ ನೋಡುತ್ತೇವೆ. ಪಾವಿತ್ರ್ಯತೆ ಬಗ್ಗೆ ನಂಬಿಕೆ ಇದೆ. ಅದಕ್ಕೆ ಧಕ್ಕೆ ಆಗಬಾರದು. ಪ್ರವಾಸಿಗರು ತಲಕಾವೇರಿಗೆ ಬರುವುದಕ್ಕೆ ವಿರೋಧ ಇಲ್ಲ. ದೇವತಾ ಮನೋಭಾವದಿಂದ ಬರಬೇಕು. ಪುಣ್ಯಕ್ಷೇತ್ರಕ್ಕೆ ಮೋಜು ಮಸ್ತಿ ಮಾಡಲು ಬರುವುದು ಬೇಡ.
ಮಾಳೇಟ್ಟಿರ ಬಿ. ಅಭಿಮನ್ಯು ಕುಮಾರ್. ಉಪಾಧ್ಯಕ್ಷ, ಕೊಡವ ಸಮಾಜಗಳ ಒಕ್ಕೂಟ.
ತಲಕಾವೇರಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದರೆ ತೊಂದರೆ ಇಲ್ಲ. ಆದರೆ ಮೋಜು ಮಸ್ತಿಗೆ ಅವಕಾಶವಿರಬಾರದು. ಹೆಚ್ಚು ಪ್ರವಾಸಿಗರು ಬಂದರೆ ಅದಾಯ ಬರುತ್ತದೆ. ಹೆಚ್ಚಿನ ಅಭಿವೃದ್ಧಿಯಾಗುತ್ತದೆ. ಮೂಲ ಸ್ಥಳದಲ್ಲಿ ಪ್ರಾವಿತ್ಯತೆ ಕಾಪಾಡಲೇಬೇಕು. ಬ್ರಹ್ಮಗಿರಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವ ಅವಕಾಶ ಮಾಡಿಕೊಡಬೇಕು.
ಚಿಮ್ಮಣಮಾಡ ಶಶಿಕುಮಾರ್, ಚಿಕ್ಕಮಂಡೂರು ಗ್ರಾಮ.
ತಲಕಾವೇರಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಬೇಕು. ಅಲ್ಲಿಯ ಪಾವಿತ್ರ್ಯತೆೆಯನ್ನು ಕಾಪಾಡಿಕೊಳ್ಳಬೇಕು ಮೋಜು ಮಸ್ತಿಗಾಗಿ ಕ್ಷೇತ್ರಕ್ಕೆ ಬಂದರೆ ಪಾವಿತ್ರ್ಯತೆಗೆ ಧಕ್ಕೆಯುಂಟಾಗುತ್ತದೆ.
ಚೇದಂಡ ಚಿಮ್ಮಿ, ಅಧ್ಯಕ್ಷರು, ಕನ್ನಿ ಕಾವೇರಿ ಸೇವಾ ಟ್ರಸ್ಟ್
ಕಾವೇರಿ ಉಗಮ ಸ್ಥಾನ ತಲಕಾವೇರಿ ಮತ್ತು ತ್ರಿವೆಣಿ ಸಂಗಮ ಕ್ಷೇತ್ರ ಭಾಗಮಂಡಲವನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ತೆಗೆದು ತೀರ್ಥ ಕ್ಷೇತ್ರಗಳನ್ನಾಗಿ ಘೋಷಿಸಬೇಕು. ಪ್ರವಾಸಿ ತಾಣವಾದರೆ ಕೊಡಗಿನ ಜನರ ನಂಬಿಕೆಗೆ ಧಕ್ಕೆಯಾಗಲಿದೆ. ಪ್ರವಾಸಿ ತಾಣವಾದರೆ ಮೋಜು ಮಸ್ತಿ ತಾನಾಗಿ ಬದಲಾವಣೆಯಾಗಲಿದೆ. ಯಾವುದೇ ಕಾರಣಕ್ಕೂ ಪ್ರವಾಸಿ ತಾಣವಾಗದಿರಲಿ.
ಶಂಭು, ಗೌಡಳ್ಳಿ ಗ್ರಾಮಸ್ಥ.
ಕಾವೇರಿ ಮಾತೆ ಕೊಡವರ ಕುಲಮಾತೆ. ದಕ್ಷಿಣ ಭಾರತದ ಅನ್ನದಾತೆ. ಜೀವನಾಡಿ... ಕೊಡವರು ಹುಟ್ಟಿ ಸಾಯುವವರೆಗೂ ದೇವಿಯ ಸನ್ನಿಧಿಯಲ್ಲಿ ನಮ್ಮ ಸಂಪ್ರಾದಾಯ, ಸಂಸ್ಕಾರಗಳನ್ನು ನಡೆಸುತ್ತೇವೆ.ಮಾತೆಯನ್ನು ತುಲಾ ಸಂಕ್ರಮಣದಂದು ಪೂಜಿಸಿ, ಆರಾಧಿಸಿ ಬರ ಮಾಡಿಕೊಳ್ಳುತ್ತೇವೆ. ನಮ್ಮ ಯಾವುದೇ ಶುಭ ಮುಹೂರ್ತ, ಕೊನೆ ಘಳಿಗೆಯಲ್ಲೂ ಕಾವೇರಿ ತೀರ್ಥ ಪ್ರಧಾನವಾಗಿದೆ. ಹಿರಿಯರಿಗೆ ಪಿಂಡ ಪ್ರದಾನ ಮಾಡಿ ನಾವು ನಮ್ಮ ಸಂಪ್ರದಾಯವನ್ನು ನಡೆಸುವ ಪೂಜನೀಯ ಕ್ಷೇತ್ರ ಕಂಡ ಕಂಡವರಿಗೆ ಮೋಜು ಮಸ್ತಿಯ ಜಾಗವಲ್ಲ.
ಮೂವೇರ ರೇಖಾ ಪ್ರಕಾಶ್, ನಿರ್ದೇಶಕಿ, ಅಖಿಲ ಕೊಡವ ಸಮಾಜ
ಕಾವೇರಿ ಉಗಮ ಸ್ಥಾನ ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರ ಹಿಂದಿನಿಂದಲೂ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದೆ. ಆ ಎರಡು ಕ್ಷೇತ್ರಗಳನ್ನು ಇತ್ತೀಚೆಗೆ ಪ್ರವಾಸೋದ್ಯಮ ಹೆಸರಿನಲ್ಲಿ ಅಪವಿತ್ರಗೊಳಿಸಲಾಗುತ್ತಿದೆ. ಈಗಲಾದರೂ ಧಾರ್ಮಿಕ ಕ್ಷೇತ್ರಗಳಲ್ಲಿ ಟೂರಿಸಮ್ ಹೆಸರಿನಲ್ಲಿ ಆಗುತ್ತಿರುವ ಅನಾಚಾರಗಳಿಗೆ ಬ್ರೇಕ್ ಹಾಕಲೇಬೇಕು.
ಬಿ.ಎ. ಲಲಿತಾ, ಗೃಹಿಣಿ, ಕುಶಾಲನಗರ
ಪ್ರವಾಸೋದ್ಯಮ ಹೆಸರಿನಲ್ಲಿ ಯಾವುದೇ ಧಾರ್ಮಿಕ ಆಚರಣೆಗಳಿಗೆ ತೊಂದರೆಯಾಗಬಾರದು. ತ್ರಿವೇಣಿ ಸಂಗಮ ಮತ್ತು ತಲಕಾವೇರಿ ಕ್ಷೇತ್ರಗಳಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಬೇಕು. ಒಟ್ಟಿನಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ಅನಾನುಕೂಲ ಆಗದಂತೆ ಮಾಡಿಕೊಂಡು ಹೋಗಬೇಕು.
ಚಿಲ್ಲನ ಗಣಿಪ್ರಸಾದ್, ಅಧ್ಯಕ್ಷ, ಗೌಡ ಸಮಾಜ, ಕುಶಾಲನಗರ
ಕಾವೇರಿ ಕರ್ನಾಟಕಕ್ಕೆ ನೀರು ನೀಡುವ ತಾಯಿ. ಆಕೆಯ ಉಗಮ ಸ್ಥಾನವನ್ನು ನಾವು ಅಷ್ಟೇ ಶ್ರದ್ಧಾ ಭಕ್ತಿಯಿಂದ ಕಾಣಬೇಕು. ಪ್ರವಾಸಿ ತಾಣವಾದರೆ ಜನರು ಮೋಜು ಮಸ್ತಿಯ ಮನಸ್ಥಿತಿಯಲ್ಲಿಯೇ ಇರುತ್ತಾರೆ. ಹಾಗಾಗಿ ಇದನ್ನು ಒಂದು ಪವಿತ್ರ ಕ್ಷೇತ್ರವೆಂದು ಘೋಷಿಸಿ ವಸ್ತ್ರಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಸಿಬೇಕು.
ಲಿಖಿತಾ ಕೆ.ಡಿ., ಗೃಹಿಣಿ, ಗೋಣಿಕೊಪ್ಪ
ತಲಕಾವೇರಿ ಪುಣ್ಯಕ್ಷೇತ್ರವಾಗಿಯೇ ಉಳಿಯಲಿದೆ ಹೊರತೂ ಪ್ರವಾಸಿ ತಾಣ ಆಗುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ತಲಕಾವೇರಿ ಧಾರ್ಮಿಕ ಸಂಪ್ರದಾಯಗಳಿಗೆ ಯಾವುದೇ ಧಕ್ಕೆಯಾಗದ ರೀತಿ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದೇಶ ಹೊರಡಿಸುವ ಅವಶ್ಯಕತೆ ಬಂದಲ್ಲಿ ಅದನ್ನು ಕೂಡ ಮಾಡಿಸಲಾಗುವುದು.
ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ