

ಶಿರಸಿ: ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಹೊಸ ರೈಲ್ವೆ ಮಾರ್ಗ ನಿರ್ಮಾಣ ಯೋಜನೆ (railway-survey )ಅಂತಿಮ ಸ್ಥಳ ಸಮೀಕ್ಷೆ ನಡೆಸಿ, ವಿಸ್ತ್ರತ ಯೋಜನಾ ವರದಿ ನೀಡಲು ಹೈದ್ರಾಬಾದ್ ಮೂಲದ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಆರ‍್ವಿ ಅಸೋಸಿಯೇಟ್ಸ್, ಆರ್ಕಿಟೆಕ್ಟ್, ಇಂಜಿನಿಯರ್ಸ್ ಆ್ಯಂಡ್ ಕನ್ಸಲ್ಟಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಜ.16 ರಂದು ಗುತ್ತಿಗೆ ಒಪ್ಪಂದಕ್ಕೆ ರೈಲ್ವೆ ಇಲಾಖೆ ಸಹಿ ಹಾಕಿದೆ. ಸರ್ವೆ ನಡೆಸಿ, ಒಂದು ವರ್ಷದ ಒಳಗೆ ಕೇಂದ್ರ ಸಚಿವಾಲಯಕ್ಕೆ ವರದಿ ನೀಡುವಂತೆ ಸೂಚಿಸಲಾಗಿದೆ.
ತಮ್ಮ ಪ್ರಯತ್ನದಿಂದ ಕಳೆದ ಮಾರ್ಚ್ 15 ರಂದು 3.95 ಕೋಟಿ ರೂ. ಮಂಜೂರಾಗಿತ್ತು. ಡಿಸೆಂಬರ್ 12 ರಂದು ಹುಬ್ಬಳ್ಳಿಯ ರೈಲ್ವೆ ಭವನದಲ್ಲಿ ನಡೆದ ಸಭೆಯಲ್ಲಿ ರಾಜ್ಯ ರೈಲ್ವೆ ಖಾರೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಜತೆ ಈ ಸಂಬAಧ ಚರ್ಚೆ ನಡೆಸಲಾಗಿತ್ತು ಎಂದು ಕಾಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಳಗುಪ್ಪ-ಸಿದ್ದಾಪುರ-ಶಿರಸಿ-ಮುಂಡಗೋಡ-ಹುಬ್ಬಳ್ಳಿ 158 ಕಿಮೀ ರೈಲ್ವೆ ಯೋಜನೆ ಪ್ರಾಥಮಿಕ ಸಮೀಕ್ಷೆ ನಡೆದಿದೆ. ಸಾಧ್ಯತಾ ಸಮೀಕ್ಷೆಯೂ ನಡೆದಿದೆ. ಈಗ ಅಂತಿಮ ಸ್ಥಳ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಿದ ನಂತರ ಸರ್ಕಾರ ಅನುಮೋದನೆ ನೀಡಬೇಕಿದೆ. ನಂತರ ಡಿಪಿಆರ್ ತಯಾರಿಸಿ, ಯೋಜನೆ ಜಾರಿಗೆ ತರಲಾಗುವುದು.