ತಾಳಗುಪ್ಪ ಹೊನ್ನಾವರ ರೈಲು ಮಾರ್ಗ ಸಮೀಕ್ಷೆಗೆ ಹಣ ಮಂಜೂರು ಸಂಸದ ಕಾಗೇರಿ ಮಾಹಿತಿ

kAGERI
Published on

ಕಾರವಾರ: ತಾಳಗುಪ್ಪ-ಹೊನ್ನಾವರ ಮತ್ತು ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲ್ವೆ ಸಂಪರ್ಕ ಯೋಜನೆಯ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಲು ರೈಲ್ವೆ ಇಲಾಖೆ 23.90 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳನ್ನು ಬೆಸೆಯುವ ಪ್ರಮುಖ ಯೋಜನೆಗಳಿಗೆ ಮರು ಜೀವ ಬಂದAತಾಗಿದೆ ಎಂದು ಅವರು ತಿಳಿಸಿದ್ದಾರೆ. ಕರಾವಳಿ, ಮಲೆನಾಡಿನ ಪ್ರವಾಸೋದ್ಯಮ, ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಈ ಯೋಜನೆ ಹೊಂದಿದೆ. ಈ ಯೋಜನೆಯು ಕೇವಲ ಪ್ರಯಾಣಿಕರ ಅನುಕೂಲಕ್ಕೆ ಮಾತ್ರವಲ್ಲ, ಪ್ರಾದೇಶಿಕ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ. ಕೃಷಿ, ವ್ಯಾಪಾರ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ.

ತಾಳಗುಪ್ಪ-ಹೊನ್ನಾವರ ಯೋಜನೆಗೆ ಈಗಾಗಲೇ ಪ್ರಾಥಮಿಕ ಹಂತದ ಸಮೀಕ್ಷೆ ಪೂರ್ಣಗೊಂಡಿದ್ದು, ಅದರ ಸಾಧಕ-ಬಾಧಕಗಳ ವಿಶ್ಲೇಷಣೆ ನಡೆದಿದೆ. ಸಮೀಕ್ಷೆಯು ಮಾರ್ಗದ ನಿಖರವಾದ ಮಾರ್ಗ, ಭೂಪ್ರದೇಶದ ವಿಶ್ಲೇಷಣೆ, ಪರಿಸರ ಪ್ರಭಾವದ ಮೌಲ್ಯಮಾಪನ ಮತ್ತು ಆರ್ಥಿಕ ಕಾರ್ಯಸಾಧ್ಯತೆಯ ಅಧ್ಯಯನವನ್ನು ಈಗ ಕೈಗೊಳ್ಳುವ ಯೋಜನೆ ಒಳಗೊಂಡಿರುತ್ತದೆ. ಸಮೀಕ್ಷೆಯ ವರದಿ ಸಲ್ಲಿಕೆಯಾದ ನಂತರ ಯೋಜನೆಯ ಅನುಷ್ಠಾನದ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ವಿವರಿಸಿದ್ದಾರೆ. ತಾಳಗುಪ್ಪ-ಹುಬ್ಬಳ್ಳಿ:

ತಾಳಗುಪ್ಪ -ಹುಬ್ಬಳ್ಳಿ ಈಗಾಗಲೇ ಅಂತಿಮ ಹಂತದ ಸರ್ವೆಯ ಅಂತಿಮ ವರದಿಯನ್ನು ರೈಲ್ವೆ ಬೋರ್ಡ್ ಗೆ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಇದರಿಂದ ನಮ್ಮ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಸಹಾಯಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net