

ಮುಧೋಳ: ಸಮಾಜದಲ್ಲಿ ಉತ್ತರೋತ್ತರವಾಗಿ ಬೆಳೆಯಬೇಕಾದರೆ ನಾವು ಎಲ್ಲ ಭಾಷೆ ಗೌರವಿಸುವ ಜತೆಗೆ ನಮ್ಮ ಮಾತೃ ಭಾಷೆಯನ್ನು ಪ್ರೀತಿಸಬೇಕು. ಪತ್ರಿಕಾರಂಗದಲ್ಲಿ ಶಕ್ತಿಯಾಗಿ ಬೆಳೆದು ಹಿಂದಿ ಭಾಷೆ ಬೆಳೆಸಿದ ಕೀರ್ತಿ ಟಂಕಸಾಲಿಯವರಿಗೆ ಸಲ್ಲುತ್ತದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸಪನಾ ಅನಿಗೋಳ ಹೇಳಿದರು.
ಮುಧೋಳದ ಜಗನ್ನಾಥರಾವ್ ಟಂಕಸಾಲಿ ಪ್ರತಿಷ್ಠಾನ ಹಾಗೂ ಹಿಂದಿ ಪ್ರಚಾರ ಸಂಘದ ಆಶ್ರಯದಲ್ಲಿ ದಿ.ಜಗನ್ನಾಥರಾವ ಟಂಕಸಾಲಿ ಸ್ಮರಣಾರ್ಥ ಭಾನುವಾರ ನಡೆದ 23ನೇ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾಷೆಯಲ್ಲಿ ಶಕ್ತಿ ತುಂಬೇಕಾದರೆ ನಿರಂತರ ಓದಬೇಕು. ಇಂದಿನ ದಿನಗಳಲ್ಲಿ ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತ ಕೆಲಸವನ್ನು ಮಾಡುತ್ತಿವೆ. ಟಂಕಸಾಲಿ ಅವರು ಅಂದು ಈ ಭಾಗದಲ್ಲಿ ಕನ್ನಡ ಪತ್ರಿಕೆ ಬೆಳೆಸಿ ಪತ್ರಿಕಾರಂಗ ಮುನ್ನಡೆಸಿದ ಧೀಮಂತ ವ್ಯಕ್ತಿಯಷ್ಟೇ ಅಲ್ಲ, ಶಕ್ತಿಯಾಗಿದ್ದರು ಎಂದರು.
ಪ್ರಸಕ್ತ ವರ್ಷದ ಪ್ರಶಸ್ತಿಗೆ ಭಾಜನರಾದ ‘ವಿಜಯವಾಣಿ’ ವರದಿಗಾರ ವೆಂಕಟೇಶ ಗುಡೆಪ್ಪನವರ ಮಾತನಾಡಿ, ಸಮಾಜದಲ್ಲಿ ನಮ್ಮನ್ನು ಗುರುತಿಸಬೇಕಾದರೆ ಸಮಾಜಕ್ಕೆ ಉಪಯುಕ್ತ, ಅಭಿವೃದ್ಧಿ ಪರ ಹಾಗೂ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸುದ್ದಿ ಬರೆಯಬೇಕು ಎಂದರು.
ಪತ್ರಕರ್ತ ವಿಶ್ವನಾಥ ಮುನವಳ್ಳಿ ಮಾತನಾಡಿ, ಪತ್ರಿಕಾರಂಗ ಉದ್ಯಮವಾಗಿದೆ. ಸುದ್ದಿಯಲ್ಲಿ ತೀವ್ರ ಪೈಪೋಟಿ ಇದ್ದು, ಇತರ ಒತ್ತಡದ ಬದುಕಿನಲ್ಲಿ ಸುದ್ದಿ ಪ್ರಕಟಣೆ ಮಾಡುವುದು ಒಂದು ಸಾಹಸದ ಕಾರ್ಯವಾಗಿದೆ. ನನ್ನ ಕುಟುಂಬದಿಂದ ಬಳುವಳಿಯಾಗಿ ಬಂದ ಬರವಣಿಗೆ ಇಂದು ಈ ಮಟ್ಟದಲ್ಲಿ ಬೆಳೆದು ನಿಲ್ಲಲು ಸಾಧ್ಯವಾಗಿದೆ ಎಂದರು.
ಹಿಂದಿ ಸಾಹಿತಿ ಜಗದೀಶ ಮಳಗಿ ಮಾತನಾಡಿ, ರಾಷ್ಟ್ರಭಾಷೆ ಹಿಂದಿ ಗೌರವಿಸುವ ಜತೆಗೆ ಮಾತೃಭಾಷೆಯನ್ನು ಪ್ರೀತಿಸೋಣ. ಹಿಂದಿ ಭಾಷೆಯನ್ನು ಎಲ್ಲರೂ ಕಲಿಯುವುದರಿಂದ ಅದರಲ್ಲಿನ ಸಿಹಿ ಎಲ್ಲೆಡೆ ಪಸರಿಸುತ್ತದೆ ಎಂದರು.
ನ್ಯಾಯವಾದಿ ಮಿಲಿಂದ ಟಂಕಸಾಲಿ, ಹಿರಿಯ ಸಾಹಿತಿ ಕೆ.ಎಂ. ಪೆಟ್ಲೂರ ಮಾತನಾಡಿದರು. ಡಾ. ಸಿದ್ದು ದಿವಾಣ, ಅನಸೂಯಾ ಉತ್ತೂರ, ಡಾ. ಶಿವಾನಂದ ಕುಬಸದ, ಎಸ್.ಎಚ್. ಹವಾಲ್ದಾರ್, ಟಿ.ಕೆ. ಹಂಚಾಟೆ, ಶಶಿಧರರ ಬುದ್ನಿ, ಅಕ್ಷಯ ಟಂಖಸಾಲಿ, ಕುಮಾರ ಹಿರೇಸೋಮಣ್ಣವರ, ಸಿದ್ದು ಕಾಳಗಿ, ಸುರೇಶ ಚಿಪ್ಪಲಕಟ್ಟಿ, ಮಹಾದೇವ ಮಡಿವಾಳರ, ಪತ್ರಕರ್ತರಾದ ಎಂ.ಎಚ್. ನದಾಫ್, ಗಣೇಶ ಮೇತ್ರಿ, ಬಿ.ಎಚ್. ಬೀಳಗಿ, ಎಲ್.ಬಿ. ಹಳ್ಳದ, ಉದಯ ಕುಲಕರ್ಣಿ, ಜಗದೀಶ ಜೀರಗಾಳ, ಮಹಾಂತೇಶ ಕರೆಹೊನ್ನ, ಶಂಕರ ಪಾಟೀಲ, ಮಲ್ಲಿಕಾರ್ಜುನ ಹೆಗ್ಗಳಗಿ ಇತರರಿದ್ದರು.
ನ್ಯಾಯವಾದಿ ರಾಮಕೃಷ್ಣ ಬುದ್ನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದ್ಮಾ ಪತ್ತಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ತುಕಾರಾಮ ಹಂಚಾಟೆ ಪರಿಚಯಿಸಿದರು. ಉದಯ ವಾಳ್ವೇಕರ, ರಶ್ಮಿ ಗಿರಿಡ್ಡೇರ ನಿರೂಪಿಸಿ, ವಂದಿಸಿದರು.