

ರಾಮದುರ್ಗ: ಗ್ರಾಮಾಡಳಿತಾಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಕೈಬರಹದ ಮುಖಾಂತರ ಸಾರ್ವಜನಿಕರಿಗೆ ತಲುಪಿಸಲು ವಿಳಂಬವಾಗುವುದನ್ನು ಅರಿತು ತ್ವರಿತ ಸೇವೆ ಒದಗಿಸಲು ಕಂದಾಯ ಇಲಾಖೆಯಿಂದ ಲ್ಯಾಪ್‌ಟಾಪ್ ವಿತರಣೆಗೆ ಮಾಡಲಾಗುತ್ತಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಶನಿವಾರ ಗ್ರಾಮ ಆಡಳಿತಾಧಿಕಾರಿಗಳಿಗೆ ಏರ್ಪಡಿಸಿದ್ದ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಸ್ತಿಯ ಹಳೇ ದಾಖಲೆಗಳು ಆಸ್ತಿದಾರರ ಜೀವನ ಇದ್ದಂತೆ. ದಾಖಲೆಗಳ ಗಣಕೀಕರಣ ಮಾಡುವಾಗ ಜಾಗ್ರತೆ ವಹಿಸಿ, ಲೋಪಗಳು ಉಂಟಾಗದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಗ್ರಾಮೀಣ ಪ್ರದೇಶದ ಜನತೆಗೆ ವಿವಿಧ ಸೇವೆ ಒದಗಿಸಲು ಗ್ರಾಮಾಡಳಿತಾಧಿಕಾರಿಗಳು ಹಾಗೂ ತಹಸೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಜನತೆಯಿಂದ ಕೇಳಿ ಬರುತ್ತಿದೆ. ಸರ್ಕಾರ ಕೊಡುವ ಸಂಬಳಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಒಂದು ವೇಳೆ ಲಂಚ ತೆಗೆದುಕೊಳ್ಳುವುದು ಸಾಬೀತಾದರೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ, ಪಾರದರ್ಶಕ ಸೇವೆ ಒದಗಿಸಲು ವಿವಿಧ ತಂತ್ರಾಂಶಗಳ ಬಳಕೆಗೆ ಸರ್ಕಾರ ಕಂದಾಯ ಇಲಾಖೆಯ ಮುಖಾಂತರ ಗ್ರಾಮ ಆಡಳಿತಾಧಿಕಾರಿಗಳಿಗೆ ನೀಡುವ ಲ್ಯಾಪ್‌ಟಾಪ್‌ಗಳು ಸಹಕಾರಿಯಾಗಲಿವೆ ಎಂದರು. ಗ್ರಾಮ ಆಡಳಿತಾಧಿಕಾರಿ ಮಹೇಶ ತೆಂಗಿನಕಾಯಿ ಲ್ಯಾಪ್‌ಟಾಪ್‌ನ ಉಪಯುಕ್ತತೆ ಕುರಿತು ಮಾತನಾಡಿದರು. ಶಿಕ್ಷಣ ಸಂಯೋಜಕ ಆನಂದತೀರ್ಥ ಜೋಶಿ ನಿರೂಪಿಸಿದರು.