ಬರ್ತ್ ಡೇ ನೆಪದಲ್ಲಿ ಕರೆದೊಯ್ದು ಅತ್ಯಾಚಾರ

Rape
Published on

ನರಗುಂದ: ಜನ್ಮದಿನ ಆಚರಿಸುವ ನೆಪದಲ್ಲಿ ಪಟ್ಟಣದಿಂದ ಇಬ್ಬರು ಅಪ್ರಾಪ್ತೆಯರನ್ನು ಕರೆದೊಯ್ದ ದುರುಳರಿಬ್ಬರು ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಏನಿದು ಘಟನೆ: ಪಟ್ಟಣದ ಯುವತಿಯೊಬ್ಬಳ ಬರ್ತ್​ಡೇ ಬುಧವಾರ ಇತ್ತು. ಬರ್ತ್​ಡೇ ಆಚರಿಸುವ ನೆಪದಲ್ಲಿ ಈಕೆಯ ಸ್ನೇಹಿತ ರಾಮದುರ್ಗಕ್ಕೆ ತೆರಳುವ ನಿಶ್ಚಯ ಮಾಡಿದ್ದ. ನಿಗದಿಯಂತೆ ಯುವತಿ ಆತನೊಂದಿಗೆ ತೆರಳಿದ್ದಾರೆ. ಆಕೆಯ ಮತ್ತೊಬ್ಬ ಗೆಳತಿಯೂ ಈ ಪ್ರಯಾಣದಲ್ಲಿ ಜತೆಯಾಗಿದ್ದಾಳೆ. ಪಟ್ಟಣದ ಮತ್ತೊಬ್ಬ ಯುವಕನೊಂದಿಗೆ ಆಕೆಯೂ ಬೈಕ್​ನಲ್ಲಿ ರಾಮದುರ್ಗಕ್ಕೆ ತೆರಳಿದ್ದಾಳೆ. ಎರಡು ಜೋಡಿ ರಾಮದುರ್ಗದ ಬೇಕರಿಯೊಂದರಲ್ಲಿ ಜನ್ಮದಿನ ಆಚರಿಸಲು ಕೇಕ್ ಖರೀದಿಸುವಾಗ ಅಲ್ಲಿದ್ದ ಸ್ಥಳೀಯರು ವಿಚಾರಿಸಿ, ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಗಾಬರಿಬಿದ್ದ ಯುವಕರಿಬ್ಬರೂ ಹುಡುಗಿಯರನ್ನೇ ಅಲ್ಲಿಯೇ ಬಿಟ್ಟು ಕಾಲ್ಕಿತ್ತಿದ್ದಾರೆ.

ರಾಮದುರ್ಗದ ಸ್ಥಳೀಯರು ಯುವತಿಯ ಚಿಕ್ಕಪ್ಪನಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಇಬ್ಬರನ್ನು ಮನೆಗೆ ಕರೆತಂದ ಪಾಲಕರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಒಂದು ತಿಂಗಳ ಹಿಂದೆಯೂ ಪುಸಲಾಯಿಸಿ ರಾಮದುರ್ಗಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿರುವುದಾಗಿ ಹುಡುಗಿ ಬಾಯಿ ಬಿಟ್ಟಿದ್ದಾಳೆ. ಬರ್ತ್​ಡೇ ನೆಪ ಹೇಳಿ ಮತ್ತೊಬ್ಬನು ನನ್ನ ಸ್ನೇಹಿತೆಯನ್ನು ದುರುದ್ದೇಶದಿಂದಲೇ ದ್ವಿಚಕ್ರ ವಾಹನದಲ್ಲಿ ಕರೆದೊಯ್ದಿದ್ದ ಎಂದು ಯುವತಿ ಪಾಲಕರಿಗೆ ತಿಳಿಸಿದ್ದಾಳೆ. ಈ ಬಗ್ಗೆ ಪಾಲಕರು ನರಗುಂದ ಠಾಣೆಗೆ ದೂರು ನೀಡಿದ್ದಾರೆ. ಸಿಪಿಐ ಮಂಜುನಾಥ ನಡುವಿನಮನಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net