ಬೆಳೆದು ನಿಂತ ಕಬ್ಬು ಕಟಾವಿಗೆ ತುರ್ತು ಕ್ರಮ ವಹಿಸಿ: ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಕಬ್ಬು ಬೆಳೆಗಾರರು

Take urgent action for sugarcane harvesting Appeal to DC mandya
Published on

ಮಂಡ್ಯ: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ನೀರಿಲ್ಲದ ಪರಿಣಾಮ ಬೆಳೆದು ನಿಂತಿರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಒಪ್ಪಿಗೆ ಕಬ್ಬನ್ನು ನಂಜನಗೂಡಿನ ಬಣ್ಣಾರಿ ಅಮ್ಮನ್ ಕಾರ್ಖಾನೆಗೆ ಸಾಗಾಣಿಕೆ ಮಾಡಲು ಅನುಮತಿ ನೀಡುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರ ಸಂಘದಿಂದ ಸೋಮವಾರ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ರಾಜ್ಯ ಸಂಚಾಲಕ ಎನ್.ಎಲ್.ಭರತರಾಜ್ ನೇತೃತ್ವದಲ್ಲಿ ಡಿಸಿ ಕಚೇರಿಗೆ ತೆರಳಿದ ಬೆಳೆಗಾರರು, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಸುತ್ತಮುತ್ತಲ ಗ್ರಾಮಗಳಲ್ಲಿ ರೈತರು ಬೆಳೆದಿರುವ ಕಬ್ಬಿಗೆ 9 ರಿಂದ 10 ತಿಂಗಳಾಗಿದೆ. ಮಳೆಯ ಅಭಾವದಿಂದ ನೀರಿನ ಕೊರತೆ ಎದುರಾಗಿದ್ದು, ಇತ್ತ ಕೃಷ್ಣರಾಜಸಾಗರದಿಂದ ನಾಲೆಗಳಿಗೆ ನೀರು ಹರಿಸದ ಪರಿಣಾಮ ಹಾಗೂ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿರುವುದರಿಂದ ಕಬ್ಬು ಬೆಳೆ ಒಣಗುತ್ತಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕಬ್ಬು ಕಾಪಾಡಲು ತುಂಬಾ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.

ಚಾಂಷುಗರ್ ಕಾರ್ಖಾನೆ ಕಳೆದ ಜನವರಿಯಲ್ಲಿ ಕಬ್ಬು ಅರೆಯುವಿಕೆ ಸ್ಥಗಿತ ಮಾಡಿದೆ. ಮಾತ್ರವಲ್ಲದೆ ಜಿಲ್ಲೆಯ ಎಲ್ಲ ಕಾರ್ಖಾನೆಯಲ್ಲಿಯೂ ಕಬ್ಬು ಅರೆಯುವುದನ್ನು ನಿಲ್ಲಿಸಿದೆ. ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲ ಮಾಡಿಕೊಡಲು ನಂಜನಗೂಡಿನ ಬಣ್ಣಾರಿ ಅಮ್ಮನ್ ಕಾರ್ಖಾನೆ ಕಬ್ಬು ಅರೆಯುವಿಕೆಯನ್ನು ಮುಂದುವರೆಸಿದೆ. ಆದ್ದರಿಂದ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಚಾಂಷುಗರ್ ಕಾರ್ಖಾನೆ ಭಾಗದ ಕಬ್ಬನ್ನು ಸರಬರಾಜು ಮಾಡಿಕೊಳ್ಳುವಂತೆ ಬಣ್ಣಾರಿ ಅಮ್ಮನ್ ಕಾರ್ಖಾನೆಯ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಬೇಕು. ಅಂತೆಯೇ ಕಬ್ಬನ್ನು ಅರೆಯಲು ಮಾಡುವ ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕು. ಕಬ್ಬು ಸಾಗಾಟ ಮಾಡಲು ಅಡ್ಡಿಪಡಿಸದಂತೆ ಎಚ್ಚರಿಕೆ ನೀಡಬೇಕು. ಇಲ್ಲದಿದ್ದರೆ ಪ್ರತಿ ಎಕರೆಗೆ ಅಂದಾಜು ಇಳುವರಿಯಷ್ಟು ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಕಬ್ಬು ಬೆಳೆಗಾರರಾದ ಹನಿಯಂಬಾಡಿ ನಾಗರಾಜು, ಚೆಲುವರಾಜ್, ಗಿರೀಶ, ಅರುಣ್‌ಕುಮಾರ್, ಎಂ.ಸಿ.ಯೋಗೇಶ, ಶಂಕರ್, ಪಿ.ಕೆ.ಅಶೋಕ್, ರಾಜಶೇಖರ್, ಹನುಮಂತೇಗೌಡ, ಶಿವಲಿಂಗೇಗೌಡ, ಪ್ರಸನ್ನ, ಧರ್ಮಲಿಂಗಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net