ಕಿವುಡ ರಾಜಕಾರಣಿಗಳ ವಿರುದ್ಧ ನುಡಿಯ ಬಾರುಕೋಲು ಹಿಡಿಯಿರಿ

mysore
Published on

ಮೈಸೂರು: ಕಿವಿ ಇಲ್ಲದವರಂತೆ ಕಿವುಡರಾಗಿ, ಬಾಯಿ ಮಾತ್ರ ಇರುವಂತೆ ವರ್ತಿಸುವ ರಾಜಕಾರಣಿಗಳ ವಿರುದ್ಧ ನುಡಿಯ ಬಾರುಕೋಲು ಹಿಡಿಯಬೇಕು ಎಂದು ಕವಯಿತ್ರಿ ಚ.ಸರ್ವಮಂಗಳಾ ಹೇಳಿದರು.


ರೂಪ ಪ್ರಕಾಶನ, ಅಂಗಳ ಸಾಹಿತ್ಯ ಬಳಗ, ಬಾರುಕೋಲು ಬಳಗ, ಮೈಸೂರು ವಿವಿ ಸಂಶೋಧಕರ ಸಂಘದ ಸಹಯೋಗದಲ್ಲಿ ಮಾನಸಗಂಗೋತ್ರಿಯ ಇಎಂಆರ್‌ಸಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಾ. ದಿವಾಕರ ಅವರ ‘ನಿರೀಕ್ಷೆ ಭರವಸೆ ಆಶಯ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ತಳ ಸಮುದಾಯಗಳ ಜನರು ಆರ್ಥಿಕತೆ ಬಗ್ಗೆ ಮಾತನಾಡುತ್ತಿರುವುದು ನರೇಂದ್ರ ಮೋದಿ ಅವರಿಗೆ ಎದೆಬಡಿತ ಹೆಚ್ಚು ಮಾಡಿದೆ. ನಿರಂಕುಶಮತಿಗಳಾಗಿ ಎಂದು ಕುವೆಂಪು ಕರೆಕೊಟ್ಟರು. ನಾವು ನರೇಂದ್ರ ಮೋದಿಯ ಭಕ್ತರಾಗಬೇಕಿಲ್ಲ. ಆರಾಧನೆಯೂ ಮಾಡಬೇಕಿಲ್ಲ. ವಸ್ತುನಿಷ್ಠವಾಗಿ ವಾಸ್ತವವನ್ನು ಹೇಳುವಂತಾಗಬೇಕು. ಒಮ್ಮೊಮ್ಮೆ ಮೌನವೂ ನಮ್ಮ ಪ್ರತಿಭಟನೆಯಾಗಬೇಕು ಎಂದರು.


ಮಂದಿರಗಳು ಆಪತ್ತಿನ ಕಾಲದಲ್ಲಿ ರಕ್ಷಣೆ ನೀಡುವಂತಿರಬೇಕು. ಈಗ ಅಯೋಧ್ಯೆಯಲ್ಲಿ ಕಟ್ಟಿರುವ ರಾಮಮಂದಿರಕ್ಕೆ ಹಿರಿಯ ನಾಗರಿಕರು, ಅಂಗವಿಕಲರು ಹೋಗಲಾಗದು ಎಂದು ಹೇಳಿದರು.


ಪ್ರವಾಹ ಬಂದಾಗ ಊರು ಕೊಚ್ಚಿಕೊಂಡು ಹೋಗುತ್ತದೆ. ಆಗ ದೇಗುಲಗಳು ಉಪಯೋಗಕ್ಕೆ ಬರಬೇಕು. ಆದರೆ, ಅಯೋಧ್ಯೆ ರಾಮಮಂದಿರದ ಚಿತ್ರಗಳನ್ನು ನೋಡಿದರೆ 75 ವರ್ಷ ಮೇಲ್ಪಟ್ಟವರು ಮೆಟ್ಟಿಲು ಮೂಲಕ ಒಳ ಹೋಗಲು ಕಷ್ಟವಾಗುತ್ತದೆ. ಹಿರಿಯ ನಾಗರಿಕರಿಗೆ ರಾಮ ಅಚ್ಚುಮೆಚ್ಚು. ಮೊದಲೆಲ್ಲ ಕಾಶಿಗೆ ಹೋಗುತ್ತಿದ್ದರು. ಈಗ ಅಯೋಧ್ಯೆ. ಆದರೆ, ಅಯೋಧ್ಯೆಗೆ ಉಳ್ಳವರು ಮಾತ್ರ ಹೋಗಲು ಸಾಧ್ಯವಾಗುವಂತಿದೆ ಎಂದು ನುಡಿದರು.


ಟಿವಿ ಮಾಧ್ಯಮಗಳು ಕೂಗುಮಾರಿಗಳಾಗಿವೆ. ಯಾರಿಗಾಗಿ ಈ ಅಬ್ಬರ? ಒಂದು ಮಾತಿನಲ್ಲಿ ಮುಗಿಸುವುದಕ್ಕೆ 20 ಮಾತುಗಳನ್ನು ಬೆಳೆಸುತ್ತಿದ್ದಾರೆ. ಘಟನೆ ಬಗ್ಗೆ ವಿವರಿಸುವುದಷ್ಟೇ ತನ್ನ ಕೆಲಸವೆಂಬುದನ್ನು ಮರೆತು ತಕ್ಕಡಿ ಹಿಡಿಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.


ಜಾತಿಗಣತಿ ಸ್ವೀಕಾರಕ್ಕೆ ಎರಡು ಮಧ್ಯಮ ಜಾತಿಗಳು ಅಡ್ಡವಾಗಿವೆ. ವರದಿ ಬಂದರೆ ತಳ ಸಮುದಾಯಗಳು ಇನ್ನಷ್ಟು ಪ್ರಬಲವಾಗುತ್ತವೆಂಬ ಭಯವಿದೆ. ಸರ್ಕಾರ ಕೂಡಲೇ ವರದಿ ಸ್ವೀಕರಿಸಬೇಕು ಎಂದು ಆಗ್ರಹಿಸಿದರು.



ಲೇಖಕ ನಾ.ದಿವಾಕರ ಮಾತನಾಡಿ, 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಮಹತ್ವದ್ದಾಗಿತ್ತು. ಪ್ರಜಾಪ್ರಭುತ್ವ ಗೆಲ್ಲುವುದರೊಂದಿಗೆ ಅಧಿಕಾರದ ಪೀಠದಲ್ಲಿ ಬದಲಾವಣೆ ಕಾಣಬೇಕೆಂದು ಬಯಸಿದ ದಿನಗಳಲ್ಲಿ ಬರೆದ ಲೇಖನಗಳಿವು ಎಂದು ಹೇಳಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಕೃತಿ ಬಿಡುಗಡೆ ಮಾಡಿದರು. ರೂಪ ಪ್ರಕಾಶನದ
ಯು.ಎಸ್. ಮಹೇಶ್, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಪತ್ರಕರ್ತ ಟಿ. ಗುರುರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net