

ಮದ್ದೂರು: ಶ್ರೀಗಂಧ ಕೃಷಿ ಮಾಡುವ ಮೂಲಕ ರೈತರು ಆರ್ಥಿಕವಾಗಿ ಪ್ರಗತಿ ಸಾಧಿಸುವಂತೆ ರಾಜ್ಯ ಶ್ರೀಗಂಧ ಬೆಳೆಗಾರರ ಸಂಘದ ಗೌರವಾಧ್ಯಕ್ಷ, ನಿವೃತ್ತ ಜಿಲ್ಲಾಧಿಕಾರಿ ಅಮರ್ ನಾರಾಯಣ್ ಸಲಹೆ ನೀಡಿದರು.
ಪಟ್ಟಣದ ತೋಟಗಾರಿಕೆ ಇಲಾಖೆಯ ನಿಖರ ಬೇಸಾಯ ತರಬೇತಿ ಉಪ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಶ್ರೀಗಂಧ ಕೃಷಿ ಜತೆಗೆ ಮಿಶ್ರ ಬೆಳೆಯಾಗಿ ತೋಟಗಾರಿಕಾ ಮತ್ತು ಸುಗಂಧ ದ್ರವ್ಯ ಬೆಳೆಗಳ ಕೃಷಿ ಬಗೆಗಿನ 1 ದಿನದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಗಂಧದ ಮರಕ್ಕೆ ಹೆಚ್ಚಿನ ಬೆಲೆಯಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಹಿಂದೆಯಂತೆ ಅದನ್ನು ಬೆಳೆಯಲು ಇದ್ದ ನಿರ್ಬಂಧಗಳ ಸಡಿಲಿಕೆ ಹಾಗೂ ರೈತರೂ ಬೆಳೆಯಲು ಇರುವ ಮಾರ್ಗಸೂಚಿಗಳನ್ನು ತಿಳಿಸಲೆಂದೇ ಈ ಅರಿವು ಕಾರ್ಯಗಾರವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಶ್ರೀಗಂಧ ಬೆಳೆಯುವ ವಿಧಾನ, ಅದನ್ನು ಮಾರುಕಟ್ಟೆ ಮಾಡಲು ಇರುವ ಸೂಚನೆಗಳನ್ನು ರೈತರು ಅರಿಯಬೇಕು ಅಷ್ಟೇ ಅಲ್ಲದೇ ಶ್ರೀಗಂಧದ ಜತೆಗೆ ಇತರ ಅಲ್ಪ ಕಾಲಿಕ ತೋಟಗಾರಿಕಾ ಬೆಳೆಯನ್ನು ಇದರ ಜತೆಯಲ್ಲಿ ಬೆಳೆಯಬಹುದು ಎಂದರು.
ಅವುಗಳ ಜತೆಗೆ ಸುಗಂಧ ದ್ರವ್ಯ ಕೃಷಿ ಮಿಶ್ರ ಬೇಸಾಯ ಮಾಡುವುದರಿಂದ ಮತ್ತಷ್ಟು ಆದಾಯವನ್ನು ಹಂತ ಹಂತವಾಗಿ ರೈತರು ಪಡೆಯಬಹುದು ಎಂದು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯ ಶ್ರೀಗಂಧ ಬೆಳೆಗಾರರ ಸಂಘದ ಉಪಾಧ್ಯಕ್ಷರಾದ ನಿವೃತ್ತ ಐಪಿಎಸ್ ಅಧಿಕಾರಿ ಶರಣಪ್ಪ, ತೋಟಗಾರಿಕಾ ಇಲಾಖೆಯ ಬೇಸಾಯ ತರಬೇತಿ ಕೇಂದ್ರದ ಉಪ ನಿರ್ದೇಶಕ ರಾಜು, ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ, ನೈಸರ್ಗಿಕ ಕೃಷಿಕರಾದ ಮಾದನಾಯಕನಹಳ್ಳಿ ದೇವರಾಜು, ಕಪನಿಗೌಡ ಮತ್ತಿತರರು ಹಾಜರಿದ್ದರು.