

ಮಡಿಕೇರಿ: ಭರವಸೆಯೊಂದಿಗೆ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಜನಸೇವೆಗೆ ಮುಂದಾಗಬೇಕಾದ ಸಂದರ್ಭ ಇಂದಿನ ದಿನಗಳಲ್ಲಿದೆ ಎಂದು ರೋಟರಿ ಜಿಲ್ಲೆ ೩೧೮೧ನ ನಿಯೋಜಿತ ಗವರ್ನರ್ ವಿಕ್ರಂದತ್ತ ಹೇಳಿದರು.
ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ನ ನೂತನ ಅಧ್ಯಕ್ಷರಾಗಿ ಪ್ರಮೋದ್ ಕುಮಾರ್‌ರೈ, ಕಾರ್ಯದರ್ಶಿ ರತ್ನಾಕರ್ ರೈ ಮತ್ತು ತಂಡಕ್ಕೆ ಮಂಗಳವಾರ ಆಯೋಜಿಸಿದ್ದ ಪದಗ್ರಹಣ ನೆರವೇರಿಸಿ ಮಾತನಾಡಿದರು.
ರೋಟರಿಯಂಥ ಜಾಗತಿಕ ಸಮಾಜಸೇವಾ ಸಂಸ್ಥೆಯ ಬಗ್ಗೆ ಜನರು ಅಪಾರವಾದ ನಂಬಿಕೆ, ಭರವಸೆಗಳನ್ನು ಇಟ್ಟುಕೊಂಡಿದ್ದಾರೆ. ಈ ನಂಬಿಕೆಗೆ ಚ್ಯುತಿಬಾರದಂತೆ ರೋಟರಿ ಸದಸ್ಯರು ಸಾಕಷ್ಟು ಛಲ, ಭರವಸೆಯೊಂದಿಗೆ ತಮಗಿರುವ ಅವಕಾಶಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯರಾಗುವಂತೆ ಕರೆ ನೀಡಿದರು.
ಎಲ್ಲರೂ ಸ್ವಾಮಿ ವಿವೇಕಾನಂದ, ಮದರೆ ಥೆರೆಸಾ ಅವರಂಥೆ ಮಹಾನ್ ವ್ಯಕ್ತಿಯಾಗಲು ಸಾಧ್ಯವಿಲ್ಲ. ಹೀಗಿದ್ದರೂ ಪ್ರತಿಯೋರ್ವರು ರೋಟರಿಯಂಥ ಬೃಹತ್ ಸಮಾಜ ಸೇವಾ ಸಂಸ್ಥೆಗಳ ಮೂಲಕ ತಮ್ಮ ಕೈಲಾದಷ್ಟು ಸಹಾಯವನ್ನು ಸಮಾಜದಲ್ಲಿ ಅಗತ್ಯವುಳ್ಳವರಿಗೆ ನೀಡಬಹುದಾಗಿದೆ. ಯುವಪೀಳಿಗಗೆ ರೋಟರಿಯ ಮಹತ್ವ ಮತ್ತು ಸಮಾಜಸೇವಾ ಕಾರ್ಯಗಳನ್ನು ಪರಿಣಾಮಕಾರಿಯಾಗಿ ತಿಳಿಹೇಳುವ ಮೂಲಕ ಯುವಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಟರಿ ಸಂಸ್ಥೆಯ ಸದಸ್ಯರಾಗುವಂತೆ ಪ್ರೇರೇಪಿಸಬೇಕು ಎಂದರು.
ರೋಟರಿಯ ಸಹಾಯಕ ಗವರ್ನರ್ ದೇವಣಿರ ತಿಲಕ್ ಪೊನ್ನಪ್ಪ ಮಾತನಾಡಿ, ರೋಟರಿ ವರ್ಷದಲ್ಲಿ ಅಂಗನವಾಡಿಗಳಿಗೆ ಮೂಲಸೌಲಭ್ಯ ಕಲ್ಪಿಸುವಿಕೆ, ಮಳೆ ನೀರು ಕೊಯ್ಲು, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರೋಟರಿಯ ಸದಸ್ಯರೆಲ್ಲರೂ ರೋಟರಿಯ ಮೂಲತತ್ವವಾದ ಭಾವೈಕ್ಯತೆ, ಸೌಹಾರ್ಧತೆಯ ಆಧಾರದಲ್ಲಿ ಒಂದಾಗಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್ ಮಿಸ್ಟಿ ಹಿಲ್ಸ್‌ನ ವಾರ್ತಾಸಂಚಿಕೆ ರೋಟೋ ಮಿಸ್ಟ್‌ನ್ನು ಬಿಡುಗಡೆಗೊಳಿಸಿ ಮಾತನಾಡಿ, ರೋಟರಿಯಂಥ ಜಾಗತಿಕ ಮಟ್ಟದ ಸೇವಾ ಸಂಸ್ಥೆಯಲ್ಲಿ ಸದಸ್ಯರಾಗಿ ಸಮಾಜಕ್ಕೆ ಕೊಡುಗೆ ನೀಡುವುದೇ ಮಹತ್ವದ ವಿಚಾರ ಎಂದರು.
ಮಿಸ್ಟಿ ಹಿಲ್ಸ್ನ ನೂತನ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಮಿಸ್ಟಿ ಹಿಲ್ಸ್ನ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಗೌಡ, ಕಾರ್ಯದರ್ಶಿ ರತ್ನಾಕರ್ ರೈ ವೇದಿಕೆಯಲ್ಲಿದ್ದರು.
ಇದೇ ಸಂದರ್ಭ ರೋಟರಿ ಮಿಸ್ಟಿ ಹಿಲ್ಸ್ನ ವಿಜ್ಞಾನ ವಾಹಿನಿಯ ಈ ವರ್ಷದ ಯೋಜನೆಗೆ ಚಾಲನೆ ನೀಡಲಾಯಿತು. ಅಂತೆಯೇ ಮಡಿಕೇರಿ ನಗರದ ಅಂಗನವಾಡಿಗಳಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಯಿತು.
ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ.ಅನಂತಶಯನ, ಪ್ರಮುಖರಾದ ಎಚ್.ಟಿ.ಅನಿಲ್, ಎ.ಕೆ.ಜೀವನ್, ಕೆ.ಡಿ.ದಯಾನಂದ್, ರಶ್ಮಿದೀಪ, ಪ್ರತಿಭಾ ರೈ, ಪಿ.ವಿ.ಅಶೋಕ್, ಎಂ.ಧನಂಜಯ್, ಹರೀಶ್ ಕುಮಾರ್, ಶಂಕರ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.
ರಾಷ್ಟ್ರೀಯ ರ‌್ಯಾಲಿ ಚಾಂಪಿಯನ್ ಅಭಿನ್ ರೈಗೆ ಸನ್ಮಾನ
ಮಿಸ್ಟಿ ಹಿಲ್ಸ್ನ ನೂತನ ಕಾರ್ಯದರ್ಶಿ ರತ್ನಾಕರ್ ರೈ, ನಮಿತಾ ರೈ ದಂಪತಿ ಪುತ್ರ ಅಭಿನ್ ರೈ ಅವರು ರಾಷ್ಟ್ರೀಯ ಮೋಟಾರ್ ರ‌್ಯಾಲಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ವಿಕ್ರಂದತ್ತ ಮತ್ತು ಗಣ್ಯರು ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಇತ್ತೀಚಿಗೆ ಅರುಣಾಚಲ ಪ್ರದೇಶದಲ್ಲಿ ಆಯೋಜಿತ ರಾಷ್ಟ್ರೀಯ ಮೋಟಾರ್ ರ‌್ಯಾಲಿಯ ೪ ವಿಭಾಗಗಳಲ್ಲಿ ಅಭಿನ್ ರೈ ಪ್ರಥಮ ಸ್ಥಾನ ಪಡೆದಿದ್ದರು. ಈವರೆಗೆ ಯುವಸಾಧಕ ಅಭಿನ್ ರೈ ಗೆ ಮೋಟಾರ್ ರ‌್ಯಾಲಿ ಸ್ಪರ್ಧೆಗಳಲ್ಲಿ ೨೫ ಪ್ರಥಮ ಸ್ಥಾನ ದೊರಕಿದೆ.