

ಮಡಿಕೇರಿ: ಗ್ರಾ.ಪಂ.ಗಳಲ್ಲಿ ದೂರದೃಷ್ಟಿ ಯೋಜನೆ ತಯಾರಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮುಂದಾಗಬೇಕು ಎಂದು ಮೈಸೂರಿನ ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ನಿರ್ದೇಶಕಿ ಕೆ.ಲಕ್ಷ್ಮಿಪ್ರಿಯಾ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾ.ಪಂ.ಗಳ ದೂರದೃಷ್ಟಿ ಯೋಜನೆ ತಯಾರಿಸುವ ಸಂಬಂಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಗುರುವಾರ ಏರ್ಪಡಿಸಲಾಗಿದ್ದ ಕಾರ್ಯಗಾರದಲ್ಲಿ ಮಾತನಾಡಿದರು.
ಗ್ರಾಮೀಣ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಬಡತನ ನಿರ್ಮೂಲನೆ, ಆರೋಗ್ಯಯುತ ಹಾಗೂ ಮಕ್ಕಳ ಮತ್ತು ಮಹಿಳೆಯರ ಸ್ನೇಹಿ ಗ್ರಾಮ, ಸ್ವಚ್ಚ ಮತ್ತು ಹಸಿರು ಗ್ರಾಮ, ಮೂಲ ಸೌಕರ್ಯ ಸ್ವಾವಲಂಬಿ, ಸಾಮಾಜಿಕ ಸುರಕ್ಷತೆ, ಉತ್ತಮ ಆಡಳಿತ ವ್ಯವಸ್ಥೆ ಒಳಗೊಂಡಿದೆ. ಆ ನಿಟ್ಟಿನಲ್ಲಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಬಡತನ ನಿರ್ಮೂಲನೆ, ಉತ್ತಮ ಆರೋಗ್ಯ, ಲಿಂಗ ಸಮಾನತೆ, ಗೌರವಯುತ ಕೆಲಸ ಮತ್ತು ಆರ್ಥಿಕ ಬೆಳವಣಿಗೆ, ಕೈಗಾರಿಕೆ, ಮೂಲ ಸೌಕರ್ಯ ಕಲ್ಪಿಸುವುದು ಹೀಗೆ ಹಲವು ಯೋಜನೆಗಳು ಸುಸ್ಥಿರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಎಲ್ಲರಿಗೂ ಶುದ್ಧ ಕುಡಿಯುವ ನೀರು, ಆರೋಗ್ಯ ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವುದು. ಗ್ರಾಮ ಸಮುದಾಯ ಜೀವನ ಮಟ್ಟ, ಬದುಕಿನ ಗುಣಮಟ್ಟ ಸುಧಾರಿಸುವುದು. ಗ್ರಾಮೀಣ ಮೂಲ ಸೌಲಭ್ಯ ಒದಗಿಸುವುದು ಹೀಗೆ ಹಲವು ಯೋಜನೆಗಳನ್ನು ಒಳಗೊಂಡಿದೆ ಎಂದು ಹೇಳಿದರು.
ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಮಾತನಾಡಿ, ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ಅನುಷ್ಠಾನ ಸಂಬಂಧ ಕಾರ್ಯಾಗಾರ ಏರ್ಪಡಿಸಲಾಗಿದೆ. ಪಂಚತಂತ್ರ ೨ ಅಪ್‌ಲೋಡ್ ಈಗಾಗಲೇ ಮಾಡಲಾಗುತ್ತದೆ. ದೂರದೃಷ್ಟಿ ಯೋಜನೆ ಪ್ರಾಮುಖ್ಯತೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆ ಅನುಷ್ಠಾನ, ಗ್ರಾಮ ಪಂಚಾಯಿತಿ ಬಲಪಡಿಸುವುದು ಮತ್ತಿತರ ಒಳಗೊಂಡಿದೆ ಎಂದರು.
ಗ್ರಾ.ಪಂ.ದೂರದೃಷಿ ಯೋಜನೆ ಕುರಿತು ಬೋಧಕ ಗಣೇಶ್ ಪ್ರಸಾದ್ ಮಾತನಾಡಿ, ಸುಸ್ಥಿರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಬಡತನ, ಜೀವನೋಪಾಯ ಮತ್ತು ಕೌಶಲ್ಯ ಅಭಿವೃದ್ಧಿ, ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾಮಾಜಿಕ ಸುರಕ್ಷಿತ ಗ್ರಾಮಕ್ಕೆ ಒತ್ತು ನೀಡುವುದು ಅಗತ್ಯ ಎಂದರು.
ಉತ್ತಮ ಆಡಳಿತ ವ್ಯವಸ್ಥೆ, ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳು, ಕೃಷಿ, ತೋಟಗಾರಿಕೆ, ಸಣ್ಣ ನೀರಾವರಿ, ಪಶುಪಾಲನೆ, ಸಾಮಾಜಿಕ ಅರಣ್ಯ, ಪ್ರವಾಸೋದ್ಯಮ, ಗ್ರಾಮೀಣ ವಸತಿ, ಕುಡಿಯುವ ನೀರಿನ ಪೂರೈಕೆ, ಪಟ್ಟಣ ಮತ್ತು ಗ್ರಾಮಾಂತರ ಯೋಜನೆಗಳು ಮತ್ತು ಲೋಕೋಪಯೋಗಿ, ಗ್ರಾಮೀಣ ವಿದ್ಯುದ್ದೀಕರಣ, ಇಂಧನ, ವಿಪತ್ತು ನಿರ್ವಹಣೆ, ಕ್ರೀಡೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆ, ಹೀಗೆ ಹಲವು ಕಾರ್ಯಕ್ರಮಗಳನ್ನು ಒಳಗೊಂಡಿದೆ ಎಂದು ಗಣೇಶ್ ಪ್ರಸಾದ್ ಹೇಳಿದರು.
ಕಾರ್ಯಗಾರದಲ್ಲಿ ಜಿ.ಪಂ.ಮುಖ್ಯ ಯೋಜನಾಧಿಕಾರಿ ರಾಜ್ ಗೋಪಾಲ್, ಯೋಜನಾ ನಿರ್ದೇಶಕ ಜಗದೀಶ್, ತಾ.ಪಂ.ಇಒಗಳಾದ ಶೇಖರ್, ಜಯಣ್ಣ, ಅಪ್ಪಣ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಇತರರು ಇದ್ದರು.