ಸರ್ಕಾರಕ್ಕೆ ವಂಚಿಸಿರುವ ಸಹಕಾರ ಸಂಘಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳಿ: ಸಚಿವ ಕೆ.ಎನ್.ರಾಜಣ್ಣ

5 smg 11
ಜಿಪಂ ಸಭಾಂಗಣದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಜಿಲ್ಲಾ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಡಾ. ಆರ್.ಸೆಲ್ವಮಣಿ, ಸ್ನೇಹಲ್ ಲೋಖಂಡೆ ಇದ್ದರು.
Published on

ಶಿವಮೊಗ್ಗ: ಸಹಕಾರ ಸಂಘಗಳಲ್ಲಿ ಯಾವುದೇ ಕಾರಣಕ್ಕೂ ಅವ್ಯವಹಾರಕ್ಕೆ ಆಸ್ಪದ ನೀಡಬಾರದು. ಈಗಾಗಲೇ ಷೇರುದಾರರು ಹಾಗೂ ಸರ್ಕಾರಕ್ಕೆ ವಂಚಿಸಿ ಅವ್ಯವಹಾರ ಮಾಡಿರುವ ಸಂಘಗಳಿಂದ ತಕ್ಷಣವೇ ನಷ್ಟದ ವಸೂಲಾತಿ ಮಾಡಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಎಚ್ಚರಿಕೆ ನೀಡಿದರು.


ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅವ್ಯವಹಾರ ನಡೆಸಿ ಷೇರುದಾರರು ಹಾಗೂ ಸರ್ಕಾರಕ್ಕೆ ವಂಚಿಸಿರುವ ಸಹಕಾರ ಸಂಘಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳಬೇಕು. 10-15 ವರ್ಷಗಳ ಹಿಂದೆಯೇ ಅವ್ಯವಹಾರ ನಡೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾನೂನು ಮತ್ತು ಅಧಿಕಾರ ಇದ್ದರೂ ಕ್ರಮ ಜಾರಿಗೊಳಿಸದೆ ನೆಪ ಹೇಳುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳ ಕೆಲಸ ಕೇವಲ ಕಚೇರಿಯಲ್ಲೇ ಕೂರುವುದಲ್ಲ. ಸಹಕಾರ ಸಂಘಗಳಿಗೆ ಆಗಿಂದ್ದಾಗೆ ಭೇಟಿ ನೀಡಿ ಅಲ್ಲಿನ ವ್ಯವಹಾರ-ವಹಿವಾಟು ಪರಿಶೀಲನೆ ಮಾಡಬೇಕು. ಜನರ ಹಣ ಹತ್ತು ಹಲವು ವರ್ಷಗಳವರೆಗೆ ವಂಚಕರ ಬಳಿ ಇದ್ದರೆ ಅದನ್ನು ವಸೂಲಾತಿ ಮಾಡುವುದನ್ನು ಬಿಟ್ಟು ಕೈಕಟ್ಟಿ ಕುಳಿತುಕೊಳ್ಳುವುದು ಸಲ್ಲದು. ಮುಂದಿನ ಬಾರಿಗೆ ಸಭೆ ನಡೆಸುವಾಗ ಪ್ರಗತಿ ಕಾಣಬೇಕು. ಇಲ್ಲವಾದರೆ ನಷ್ಟದ ಹೊಣೆಯನ್ನು ಆಯಾ ಅಧಿಕಾರಿಗಳೇ ಹೊರಬೇಕಾಗುತ್ತದೆ ಎಂದರು.
ಶೀಘ್ರ ಸಮಪಾಲನಾಧಿಕಾರಿಗಳ ನೇಮಿಸಿ: ಅವ್ಯವಹಾರ ನಡೆಸಿ ಕಪ್ಪುಪಟ್ಟಿಗೆ ಹೋಗಿರುವ ಸಂಘಗಳಿಗೆ ತ್ವರಿತವಾಗಿ ಸಮಪಾಲನಾಧಿಕಾರಿ(ಲಿಕ್ವಿಡೇಟರ್) ನೇಮಕ ಮಾಡಿ ಸಮಾಪನೆಗೊಳಿಸುವಂತೆ ಸಚಿವ ರಾಜಣ್ಣ ಸೂಚಿಸಿದರು. ಭ್ರಷ್ಟಾಚಾರ ನಡೆಸಿರುವ ಸಹಕಾರ ಸಂಘಗಳಿಗೆ ತಕ್ಷಣವೇ ಲಿಕ್ವಿಡೇಟರ್ ನೇಮಕ ಮಾಡಬೇಕು. ಯಾವುದೇ ನೆಪ ಹೇಳದೆ ದಾಖಲೆಗಳನ್ನು ವಶಕ್ಕೆ ಪಡೆದು ಆಸ್ತಿ ಮೌಲ್ಯಮಾಪನ ಮಾಡಿ ಮುಂದಿನ ಕ್ರಮ ಕೈಗೊಂಡು ಷೇರುದಾರರ ಹಣ ಹಿಂಪಡೆಯುವಂತೆ ಸೂಚಿಸಿದರು. ಜತೆಗೆ ಕಾರ್ಯನಿರ್ವಹಿಸದೆ ಇರುವ ಸಹಕಾರ ಸಂಘಗಳನ್ನು ತಕ್ಷಣವೇ ಸಮಾಪನೆ ಮಾಡಬೇಕು. ಸೊರಬದ ತಲಕಾಲುಕೊಪ್ಪದ ಸಹಕಾರ ಸಂಘ ಸಮಾಪನೆಗೊಂಡು 15 ವರ್ಷಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಇಷ್ಟು ವಿಳಂಬವಾದರೆ ಷೇರುದಾರರು ಹಾಗೂ ಠೇವಣಿದಾರರ ಗತಿ ಏನು ಎಂದು ಪ್ರಶ್ನಿಸಿದರು.
ಪಾರ್ಲರ್‌ಗಳ ರಿಯಾಲಿಟಿ ಚೆಕ್ ಮಾಡಿ: ನಂದಿನಿ ಹಾಲನ್ನು ಧಾರವಾಡದ ಕೆಎಂಎಫ್‌ಗೆ ಪೂರೈಕೆ ಮಾಡುವ ಕಾರಣ ಶಿಮುಲ್ ಮೇಲೆ ವಾರ್ಷಿಕ 10 ಲಕ್ಷ ರೂ. ಸಾರಿಗೆ ಹೊರೆ ಬೀಳುತ್ತಿದ್ದು ಇದನ್ನು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಿದಾಗ ಯಾಕೆ ಗಮನಕ್ಕೆ ತರಲಿಲ್ಲ ಎಂದು ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಶೇಖರ್ ಅವರನ್ನು ಪ್ರಶ್ನಿಸಿದ ಸಚಿವರು, ಜತೆಗೆ ನಂದಿನಿ ಹಾಲಿನ ಪಾರ್ಲರ್‌ಗಳಿಗೆ ಭೇಟಿ ನೀಡಿ ನಂದಿನಿ ಉತ್ಪನ್ನಗಳನ್ನು ಹೊರತುಪಡಿಸಿ ಬೇರೆ ಮಾರಾಟ ಮಾಡಿದರೆ ಅಂತಹವರ ಪರವಾನಗಿ ರದ್ದು ಮಾಡಬೇಕು ಎಂದು ಸೂಚಿಸಿದರು. ಕೆಲವೆಡೆ ಕಲಬೆರೆಕೆ ಹಾಲು ಪೂರೈಕೆ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅಲ್ಲದೆ, ಮಾರ್ಜಿನ್ ಜಾಸ್ತಿ ಎನ್ನುವ ಕಾರಣಕ್ಕೆ ಇತರ ಹಾಲುಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದರು.
ಒಬ್ಬ ರೈತ ಕೂಡ ಹೊರಗುಳಿಯುವಂತಿಲ್ಲ: ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ನೀಡುತ್ತಿರುವ ಕೃಷಿ ಸಾಲವನ್ನು ಸಣ್ಣ ಮತ್ತು ಮಧ್ಯಮ ರೈತರಿಗೆ ಹೆಚ್ಚು ನೀಡಲು ಕ್ರಮ ಕೈಗೊಳ್ಳಬೇಕು. ಆರ್ಥಿಕ ಸಬಲೀಕರಣ ಮಾಡುವ ಉದ್ದೇಶ ಇದಾಗಿರುವುದರಿಂದ ಕೊಟ್ಟವರಿಗೇ ಹೆಚ್ಚುವರಿ ಸಾಲ ನೀಡುವುದು ಬೇಡ ಎಂದು ಸಚಿವರು ಸಲಹೆ ನೀಡಿದರು. ಆದರೆ ಜಿಲ್ಲೆಯಲ್ಲಿ ಒಬ್ಬ ರೈತ ಕೂಡ ಸೌಲಭ್ಯದಿಂದ ಹೊರಗುಳಿಯುವಂಯಿಲ್ಲ. ನೂರಕ್ಕೆ ನೂರರಷ್ಟು ರೈತರಿಗೆ ಸಾಲ ಲಭ್ಯವಾಗಬೇಕೆಂದು ಹೇಳಿದರು. ಸ್ವಂತ ಕಟ್ಟಡಗಳಿಲ್ಲದ ಸಹಕಾರ ಸಂಘಗಳು ನಿವೇಶನ ಪಡೆದು ಕಟ್ಟಡ ನಿರ್ಮಿಸಲು ಮುಂದಾದರೆ ಇಲಾಖೆಯಿಂದ ಅನುದಾನ ನೀಡಲಾಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಸಹಕಾರ ಸಂಘ ತೆರೆಯಲು ಸರ್ಕಾರ ಮುಂದಾಗಿದೆ ಎಂದರು.
ನಿಷ್ಕ್ರಿಯ ಸಂಘಗಳ ನೋಂದಣಿ ರದ್ದತಿಗೆ ಸೂಚನೆ: ಡಿಸಿಸಿ ಬ್ಯಾಂಕ್‌ನ ಮಾರಾಟ ಮತ್ತು ವಸೂಲಾಧಿಕಾರಿ ಮಹಾದೇವಪ್ಪ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 1,313 ಸಹಕಾರ ಸಂಘಗಳಿದ್ದು, 915 ಸಂಘಗಳು ಲಾಭದಲ್ಲಿವೆ. 333 ನಷ್ಟದಲ್ಲಿ ಮತ್ತು 65 ಲಾಭ, ನಷ್ಟವಿಲ್ಲದೆ ನಡೆಯುತ್ತಿವೆ ಎಂದರು. ಇದಕ್ಕೆ ಪ್ರತಿಕ್ರತಿಯಿಸಿದ ಸಚಿವರು, ಕಾರ್ಯ ನಿರ್ವಹಿಸದ ಸಂಘಗಳ ನೋಂದಣಿಯನ್ನು ನಿಯಮಾನುಸಾರ ರದ್ದುಪಡಿಸಬೇಕು. ನಷ್ಟದಲ್ಲಿರುವ ಸಂಘಗಳ ಕುರಿತು ಸೂಕ್ತ ಕ್ರಮ ಕೈಗೊಂಡು ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಎಲ್ಲ ಸೊಸೈಟಿ ಲಿಕ್ವಿಡೇಟರ್‌ಗಳು ಚಾರ್ಜ್ ತೆಗೆದುಕೊಂಡು ಸಂಘದ ಆಸ್ತಿ ಮತ್ತು ಭಾದ್ಯತೆಗಳ ಪಟ್ಟಿ ಮಾಡಿ ನಿರ್ವಹಿಸಬೇಕು. ಸೊಸೈಟಿ ಆಸ್ತಿಯನ್ನು ಸಂರಕ್ಷಿಸಬೇಕು. ಹಣ ದುರ್ಬಳಕೆ ಪ್ರಕರಣಗಳಲ್ಲಿ ಸಂಬಂಧಿಸಿದವರ ಆಸ್ತಿಯನ್ನು ಲಗತ್ತಿಸಿ, ಇಸಿ ಮತ್ತು ಖಾತೆಯಲ್ಲಿ ಇದು ಬರುವಂತೆ ಮಾಡಿ ಕ್ರಮ ವಹಿಸಬೇಕು. ಸಾರ್ವಜನಿಕರ ಹಣದ ವಿಷಯದಲ್ಲಿ ನ್ಯಾಯಯುತವಾಗಿ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಇದ್ದರು.

ಸಾಲ ವಸೂಲಾತಿ ಕಡೆ ಗಮನ ಹರಿಸಬೇಕು. ನಾನು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡುತ್ತೇನೆ. ಹಣ ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಚನೆ ಮತ್ತು ಆಡಳಿತ ವಿಕೇಂದ್ರೀಕರಣ ಮಾಡಲು ಕ್ರಮ ವಹಿಸಲಾಗುವುದು.ಕೆ.ಎನ್.ರಾಜಣ್ಣ, ಸಹಕಾರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net