

ಅಮೀನಗಡ: ಬ್ಯಾಂಕ್ ಸಿಬ್ಬಂದಿ ಸಾಲ ವಸೂಲಾತಿಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಾಗ ಮಾತ್ರ ಬಾಂಕ್ ಹೆಚ್ಚು ಲಾಭಾಂಶ ಹಾಗೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ರಾಜರಾಜೇಶ್ವರಿ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.
ಪಟ್ಟಣದ ಸಮೀಪ ಸೂಳೇಭಾವಿಯಲ್ಲಿ ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಅವರ ತೋಟದಲ್ಲಿ ಭಾನುವಾರ ನಡೆದ ರಾಜರಾಜೇಶ್ವರಿ ಪತ್ತಿನ ಸಹಕಾರ ಸಂಘದ 28ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.
ಮುಂದಿನ ವರ್ಷದಲ್ಲಿ ಎರಡ್ಮೂರು ಹೊಸ ಶಾಖೆಗಳನ್ನು ಪ್ರಾರಂಭಿಸಲಾಗುವುದು. 2024-25 ಸಾಲಿನಲ್ಲಿ ಲಾಭಾಂಶದಲ್ಲಿ 40 ಲಕ್ಷ ರೂಗಳಿಗೂ ಹೆಚ್ಚು ಲಾಭ ಗಳಿಸುವಲ್ಲಿ ಪ್ರಯತ್ನಿಸಲಾಗುವುದು. ಬ್ಯಾಂಕ್ ಪ್ರಗತಿಗೆ ನಿರ್ದೇಶಕರು, ಸಿಬ್ಬಂದಿ, ಸದಸ್ಯರ ಸಹಕಾರವೇ ಮುಖ್ಯ ಎಂದರು.
ಗಾಯತ್ರಿ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಕಲಬುರ್ಗಿ ಜ್ಯೋತಿ ಬೆಳಗಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪತ್ತಿನ ಸಹಕಾರಿ ಸಂಘಗಳು ನೇಕಾರರಿಗೆ, ಬಡಕೂಲಿ ಕಾರ್ಮಿಕರಿಗೆ ಹಾಗೂ ಕಟ್ಟಕಡೆ ವ್ಯಕ್ತಿಗೂ ಹೆಚ್ಚು ಅನಕೂಲವಾಗಿದೆ. ಸಹಕಾರವಿದ್ದರೆ ಮಾತ್ರ ಸಹಕಾರ ಸಂಘಗಳು ಯಶಸ್ವಿಯಾಗುತ್ತವೆ. ಗ್ರಾಹಕರ, ಆಡಳಿತ ಮಂಡಳಿ ಸದಸ್ಯರ, ಸಲಹಾ ಸಮಿತಿ ಸದಸ್ಯರ ಹಾಗೂ ಸಿಬ್ಬಂದಿ ಸಹಕಾರದಿಂದ 32 ಲಕ್ಷ ರೂ. ಗಳಿಸಿದೆ ಎಂದರು.
ಬ್ಯಾಂಕ್ 2023-24ನೇ ಸಾಲಿನಲ್ಲಿ ಒಟ್ಟು 2669 ಸದಸ್ಯರನ್ನು ಹೊಂದಿದ್ದು, ಷೇರು ಬಂಡವಾಳ 97 ಲಕ್ಷ ರೂ. ಹೊಂದಿದೆ. 9 ಕೋಟಿ ಸಾಲ ವಿತರಿಸಲಾಗಿದೆ ಎಂದರು.
ರಹೇಮಾನಸಾಬ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಬ್ಯಾಂಕಿನ ಉಪಾಧ್ಯಕ್ಷ ಮಹಿಬೂಬಲಾ ದೊಡ್ಡಮನಿ, ಆಡಳಿತ ಮಂಡಳಿ ಸದಸ್ಯರಾದ ಶಂಕ್ರಪ್ಪ ನೇಗಲಿ, ಮುತ್ತಪ್ಪ ಕಾಳನ್ನವರ ಭೀಮನಗೌಡ ಗೌಡರ, ದುರಗಪ್ಪ ಹೊಸಮನಿ, ಮೈನಪ್ಪ ಸಿಂಗಾಡಿ, ಗ್ರಾಪಂ ಅಧ್ಯಕ್ಷ ಪಿಡ್ಡಪ್ಪ ಕುರಿ, ಕೆ.ಎಚ್. ಪಾಟೀಲ, ಸಿದ್ದಮ್ಮ ಪಾಟೀಲ, ನಾಗರಾಜ ಕಲಬುರ್ಗಿ, ಗದಗಯ್ಯ ನಂಜಯನಮಠ, ಪ್ರಧಾನ ವ್ಯವಸ್ಥಾಪಕ ಸುರೇಶ ವೈ. ಎ. ಹಾಗೂ ಸಿಬ್ಬಂದಿ ಸದಸ್ಯರು ಇತರರಿದ್ದರು.