

ಸಿಂಧನೂರು: ಕೋರ್ಟ್ ಕಲಾಪದ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆದು ಸಂವಿಧಾನ ಮತ್ತು ನ್ಯಾಯಾಂಗದ ಮೇಲೆ ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿಪಿಐ (ಎಂಎಲ್) ಲಿಬರೇಷನ್ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಇದನ್ನೂ ಓದಿ:ಕೋರ್ಟ್ ಕಲಾಪಗಳಲ್ಲಿ ವ್ಯತ್ಯಯ
ದಲಿತ ಸಮುದಾಯದ ವ್ಯಕ್ತಿ ದೇಶದ ಅತ್ಯುನ್ನತ ಪದವಿಯಲ್ಲಿ ಇರುವುದನ್ನು ಸಹಿಸದೇ ಕೋರ್ಟ್ ಕಲಾಪದ ಸಮಯದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆದಿರುವ ಘಟನೆ ಆಘಾತಕಾರಿಯಾಗಿದ್ದು, ಈ ಕೃತ್ಯವನ್ನು ಬಲವಾಗಿ ಖಂಡಿಸುತ್ತೇವೆ. ಕೂಡಲೇ ತಪ್ಪಿತಸ್ಥನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಿ ದೇಶದ್ರೋಹಿ ಕಾನೂನಿನಡಿ ಕೇಸ್ ದಾಖಲಿಸಬೇಕು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು. ಇಂಥ ದುಷ್ಕೃತ್ಯಗಳು ಮರುಕಳಿಸದಂತೆ ಕ್ರಮ ಕೈಗೊಂಡು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಒತ್ತಾಯಿಸಿ ಉಪತಹಸೀಲ್ದಾರ್ ಚಂದ್ರಶೇಖರಗೆ ಮನವಿ ಸಲ್ಲಿಸಲಾಯಿತು.
ಸಿಪಿಐ (ಎಂಎಲ್) ಲಿಬರೇಷನ್ ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಪ್ರಮುಖರಾದ ಬಸವರಾಜ ಕೊಂಡೆ, ರಾಘವೇಂದ್ರ ಉಪ್ಪಳ, ದೇವರಾಜ ಉಪ್ಪಳ, ಬಸವರಾಜ ಬೆಳಗುರ್ಕಿ, ಶೇಕ್ಷಾವಲಿ ಜನತಾಕಾಲೋನಿ, ತಿಮ್ಮಾರಡ್ಡಿ, ದುರುಗಪ್ಪ ಬೆಳಗುರ್ಕಿ, ಶರಣಪ್ಪ ಬೆಳಗುರ್ಕಿ, ಮಲ್ಲಿಕಾರ್ಜುನ ಸಿಂಧನೂರು ಇತರರಿದ್ದರು.