

ಕೆ.ಆರ್.ಪೇಟೆ: ಪಟ್ಟಣದ ಕೆಪಿಎಸ್ ಶಾಲೆ ವಿರುದ್ಧ ಕೆಲವರು ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರದ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಶಾಲೆ ಮಕ್ಕಳ ಪಾಲಕರು ಶಾಸಕರನ್ನು ಆಗ್ರಹಿಸಿದರು.
ಶಾಲಾ ಆವರಣದಲ್ಲಿ ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪಾಲಕರ ಸಭೆಯಲ್ಲಿ ಪಾಲ್ಗೊಂಡಿದ್ದ ಪಾಲಕರು, ಕೆಪಿಎಸ್ ಶಾಲೆ ವಿರುದ್ಧದ ಅಪಪ್ರಚಾರ ಮತ್ತು ಆರ್‌ಟಿಐ ಕಾರ್ಯಕರ್ತರ ಹೆಸರಿನಲ್ಲಿ ನೀಡುತ್ತಿರುವ ಕಿರುಕುಳವನ್ನು ಖಂಡಿಸಿದರು.
ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಸೂಕ್ತ ಅನುದಾನ ನೀಡುತ್ತಿಲ್ಲ. ಇದನ್ನು ಮನಗಂಡು ಪಾಲಕರೇ ಒಂದಷ್ಟು ಹಣವನ್ನು ನಿಗದಿಪಡಿಸಿ ಶಾಲೆ ಅಭಿವೃದ್ಧಿಗೆ ನೀಡುತ್ತಿದ್ದಾರೆ. ಅಲ್ಲದೆ ಸಭೆಯಲ್ಲಿ ನಿರ್ಧರಿಸಲಾದ ಮೊತ್ತವನ್ನು ಮಾತ್ರ ಪಡೆದು ರಸೀದಿ ನೀಡಿದ್ದಾರೆ ಎಂದರು.
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸರ್ಕಾರಿ ಶಾಲೆಯ ಅಬಿವೃದ್ಧಿಯನ್ನು ಸಹಿಸಲಾಗದೆ ಅಪಪ್ರಚಾರ ಮಾಡುತ್ತಿದ್ದಾರೆ. ಶಾಲೆಯ ಅಭಿವೃದ್ಧಿ ಹಾಗೂ ಮೂಲ ಸೌಲಭ್ಯಕ್ಕೆ ದೇಣಿಗೆ ರೂಪದಲ್ಲಿ ಹಣ ನೀಡಲಗುತ್ತಿದೆ. ಇದಕ್ಕೂ ಶಾಲೆ ರಸೀದಿ ನೀಡುತ್ತಿದೆ. ಶಾಲೆಯ ಅಭಿವೃದ್ಧಿಗೆ ಸಹಾಯ ಮಾಡಲು ಇಚ್ಛೆಯಿಲ್ಲದವರು ಸುಮ್ಮನಿರಬೇಕು. ಕೆಲವು ಪಿತೂರಿದಾರರ ಜತೆ ಶಾಮೀಲಾಗಿ ದೂರು ಬರೆದು ಶಿಕ್ಷಣ ಸಂಸ್ಥೆಯ ಹೆಸರಿಗೆ ಕಳಂಕ ತರಬಾರದು ಎಂದು ಆಗ್ರಹಿಸಿದರು.
ಎಸ್‌ಡಿಎಂಸಿ ಪರ ಮಾತನಾಡಿದ ಸಿ.ಬಿ.ಚೇತನಕುಮಾರ್, ಕೆಪಿಎಸ್ ಶಾಲೆ ಗುಣಮಟ್ಟದ ಶಿಕ್ಷಣದೊಂದಿಗೆ ಪಟ್ಟಣದ ಖಾಸಗಿ ಶಾಲೆಗಳಿಗೆ ಪ್ರತಿಸ್ಪರ್ಧಿಯಾಗಿ ಕೆಲಸ ಮಾಡುತ್ತಿದೆ. ಖಾಸಗಿ ಶಾಲೆಯಲ್ಲಿ ಡೊನೇಷನ್ ಹಣ ಕಟ್ಟಲಾರದ ಸಾಕಷ್ಟು ಮಕ್ಕಳು ಈ ಶಾಲೆಗೆ ಸೇರಿದ್ದಾರೆ ಎಂದರು.
1 ರಿಂದ 5ನೇ ತರಗತಿಯವರೆಗೆ 316 ಮಕ್ಕಳು ದಾಖಲಾಗಿದ್ದು, 191 ಪಾಲಕರು ಮಾತ್ರ ಹಣ ನೀಡಿದ್ದಾರೆ. ಶಾಲೆ ಶೌಚಗೃಹ ಸ್ವಚ್ಛ ಮಾಡಲು ಅಗತ್ಯ ಡಿ.ಗ್ರೂಪ್ ಸಿಬ್ಬಂದಿ ಇಲ್ಲ.ಜತೆಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. 8 ಜನ ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ್ದು ಅಗತ್ಯ ಗೌರವಧನ ನೀಡಲಾಗುತ್ತಿದೆ. ಎಲ್ಲ ಹಣಕಾಸಿನ ವ್ಯವಹಾರಗಳನ್ನು ಪಾರದರ್ಶಕವಾಗಿ ಮಾಡಲಾಗುತ್ತಿದೆ. ಆದರೆ ಕೆಲವರು ಶಾಲೆಯ ವಿರುದ್ಧ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿರುವುದು ಶೋಭೆ ತರುವುದಿಲ್ಲ. ಇದು ಮುಂದುವರಿದರೆ ಅಪಪ್ರಚಾರ ಮಾಡುತ್ತಿರುವವರ ಮನೆಯ ಮುಂದೆ ಪಾಲಕರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ಶಾಲೆ ವಿರುದ್ಧದ ಆರೋಪಗಳನ್ನು ಪಾಲಕರು ಗಂಭೀರವಾಗಿ ಪರಿಗಣಿಸಬೇಕು. ನಾನು ಶಾಸಕನಾಗುವ ಮುನ್ನವೇ ಇಲ್ಲಿ ತಹಸೀಲ್ದಾರ್ ಆಗಿದ್ದ ಕೆಂಗೇರಿ ವಿಶ್ಚಒಕ್ಕಲಿಗರ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಹಾಗೂ ಪ್ರಾಂಶುಪಾಲರಾಗಿದ್ದ ಡಿ.ಬಿ.ಸತ್ಯ, ಉಪಪ್ರಾಂಶುಪಾಲ ತಿಮ್ಮೇಗೌಡ ಕೆಪಿಎಸ್ ಶಾಲೆಯ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. 120 ಮಕ್ಕಳಿಗೆ ಇಳಿದಿದ್ದ ಸಂಖ್ಯೆಯನ್ನು 2400 ಮಕ್ಕಳಿಗೆ ಹೆಚ್ಚಿಸಿದ್ದಾರೆ. ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಹ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಜತೆಗೆ ಸ್ಥಳೀಯ ಅನೇಕ ದಾನಿಗಳು, ಹಿರಿಯ ವಿದ್ಯಾರ್ಥಿಗಳು ಧನ ಸಹಾಯ ಮಾಡಿ ಶಾಲೆ ಉಳಿಸಲು ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯಲ್ಲಿ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ಸೇರಿದಂತೆ ಎಲ್ಲವನ್ನೂ ನೀಡಲಾಗುತ್ತಿದೆ. ಕೆಲವರು ತಮಗೆ ಬೇಕಾದ ವ್ಯಕ್ತಿಗಳನ್ನು ಶಾಲಾಭಿವೃದ್ಧಿ ಸಮಿತಿಗೆ ಸೇರಿಸಲು ಪ್ರಯತ್ನಿಸಿ ವಿಫಲರಾದರು. ಹೀಗಾಗಿ ವ್ಯವಸ್ಥಿತ ಅಪಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಸಭೆಯಲ್ಲಿ ಕೆಪಿಎಸ್ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಿ.ಬಿ.ಚೇತನಕುಮಾರ್, ಸದಸ್ಯರಾದ ಎನ್.ಜೆ.ಮಂಜು, ಕೆ.ಆರ್.ಪುಟ್ಟಸ್ವಾಮಿ, ಲೋಕೇಶ್, ಲಕ್ಷ್ಮೀ ಪ್ರಸನ್ನ, ಜಗದೀಶ್, ಮಂಜು, ಮಮತಾ, ಕಾವ್ಯಾ, ಸುಕನ್ಯಾ, ಪ್ರಾಂಶುಪಾಲ ಪುಲಿಗೆರಯ್ಯ, ಉಪ ಪ್ರಾಂಶುಪಾಲ ರಾಘವೇಂದ್ರ, ಮುಖ್ಯ ಶಿಕ್ಷಕಕಿ ನಾಗರತ್ನಾ, ಪಾಲಕರಾದ ಮಹದೇವ, ನಗ್ತಾಭಾನು, ಮಹಮದ್ ಸಾದಿಕ್, ಪ್ರಭಾಕರ್, ಸುಕನ್ಯಾ ಮತ್ತಿತರರು ಇದ್ದರು.