ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಿ

d protest
ಬಾಳೆಹೊನ್ನೂರಿನಲ್ಲಿ ವೈದ್ಯರು ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್‌ಗೆ ಮನವಿ ಸಲ್ಲಿಸಿದರು. ಡಾ. ಎಲ್ಡೋಸ್ ವರ್ಗೀಸ್, ಡಾ. ಗೀತಾ, ಸುನೀಲ್ ರೈ, ಎಂ.ಬಿ.ರಮೇಶ್, ನಾಗೇಶ್ ಪೈ ಇತರರಿದ್ದರು.
Published on

ಬಾಳೆಹೊನ್ನೂರು: ಮೇಲ್ಪಾಲ್ ಆಯುಷ್ ವೈದ್ಯ ಗಣೇಶ್ ಭಟ್ ಮೇಲೆ ಶುಕ್ರವಾರ ನಡೆದ ಹಲ್ಲೆ ಪ್ರಕರಣ ಖಂಡಿಸಿ ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಶಾಖೆಯಿಂದ ಶನಿವಾರ ಪಟ್ಟಣದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.

ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ವೈದ್ಯರು ಕಪ್ಪುಪಟ್ಟಿ ಧರಿಸಿ ಜೇಸಿ ವೃತ್ತದಿಂದ ಮೌನ ಮೆರವಣಿಗೆ ನಡೆಸಿ ಬಸ್ ನಿಲ್ದಾಣದ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಸಾಗಿ ಪೊಲೀಸ್ ಠಾಣೆಗೆ ತೆರಳಿದರು. ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಡಾ. ಎಲ್ಡೋಸ್ ಟಿ.ವರ್ಗೀಸ್ ಮಾತನಾಡಿ, ವೈದ್ಯರ ಮೇಲೆ ನಡೆದ ಹಲ್ಲೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಇಂಥ ಘಟನೆಗಳಿಂದ ವೈದ್ಯರ ಆತ್ಮಸ್ಥೈರ್ಯ ಕುಸಿಯಲಿದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಗೀತಾ ಮಾತನಾಡಿ, ಕರ್ತವ್ಯನಿರತ ವೈದ್ಯರ ಮೇಲೆ ನಡೆದ ಹಲ್ಲೆ ಹೇಯವಾಗಿದೆ. ಪೊಲೀಸರು ಯಾವುದೇ ಮುಲಾಜಿಗೆ ಒಳಗಾಗದೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವೈದ್ಯಾಧಿಕಾರಿಗಳ ಸಂಘದ ಕಾರ್ಯದರ್ಶಿ ಡಾ. ಅಶ್ವತ್ಥ್ ಬಾಬು, ಉಪಾಧ್ಯಕ್ಷ ಡಾ. ಮೋಹನ್‌ಕುಮಾರ್, ವೈದ್ಯರಾದ ಕೊಪ್ಪದ ಉದಯಶಂಕರ್, ಡಾ. ಸುನೀಲ್ ರೈ, ಡಾ. ಎಂ.ಬಿ.ರಮೇಶ್, ಡಾ. ನಟರಾಜ್ ರಾವ್, ಡಾ. ನಾಗೇಶ್ ಪೈ, ಡಾ. ಪ್ರವೀಣ್, ಡಾ. ಸಂತೋಷ್, ಡಾ. ಕೃಷ್ಣಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net