ಶಿಕ್ಷಕರ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಿ

22-09-Shiva-4
ಸರ್ಕಾರಿ ಶಾಲಾ ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಕ್ರಮಕೈಗೊಳ್ಳುವಂತೆ ರಾಯಚೂರಿನಲ್ಲಿ ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಪ್ಪ ಮುರಡಿ, ಪದಾಕಾರಿಗಳಾದ ಸುರೇಶ ಕುರ್ಡಿ, ಹನುಮಂತಪ್ಪ, ರಂಗನಾಥ ಇದ್ದರು.
Published on

ರಾಯಚೂರು: ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಒತ್ತಾಯಿಸಿದೆ.
ಸಂಘದ ನಿಯೋಗ ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪಗೆ ಶುಕ್ರವಾರ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಖಾಲಿಯಿರುವ ಮುಖ್ಯಗುರು ಹುದ್ದೆಗಳಿಗೆ ಸಹ ಶಿಕ್ಷಕರಿಗೆ ಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.
ಶಾಲಾ ಮಕ್ಕಳಿಗೆ ಮೊಟ್ಟೆಗಳನ್ನು ನೀಡಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಏರಿಕೆಯಾಗಿರುವುದರಿಂದ ಮುಖ್ಯಗುರು ಸಮಸ್ಯೆ ಎದುರಿಸುವಂತಾಗಿದೆ. ಇಲಾಖೆಯಿಂದ ಟೆಂಡರ್ ಕರೆದು ಶಾಲೆಗಳಿಗೆ ಮೊಟ್ಟೆ ವಿತರಿಸಲು ಕ್ರಮಕೈಗೊಳ್ಳಬೇಕು.
ಶಾಲೆಗಳಲ್ಲಿ ದಾಖಲಾತಿ ಸಂಗ್ರಹಕ್ಕೆ ಮತ್ತು ತಾಂತ್ರಿಕ ಕೆಲಸ ನಿರ್ವಹಿಸಲು ವಲಯವಾರು ಒಬ್ಬ ಕಂಪ್ಯೂಟರ್ ಆಪರೇಟರ್ ನೇಮಕ ಮಾಡಬೇಕು. ವರ್ಗಾವಣೆಗೊಂಡ ಶಿಕ್ಷಕರನ್ನು ಸರ್ಕಾರದ ನಿಯಮದಂತೆ ಬಿಡುಗಡೆಗೊಳಿಸಲು ಸೂಚಿಸಬೇಕು.
ಎನ್‌ಪಿಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಪ್ರತಿ ಶಾಲೆಗೆ ಪರಿಚಾರಕರನ್ನು ನೇಮಕ ಮಾಡಬೇಕು. ಜಿಲ್ಲಾ ಕೇಂದ್ರದಲ್ಲಿ ಗುರುಭವನ ನಿರ್ಮಾಣ ಅನುದಾನ ಮಂಜೂರು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ನಿಯೋಗದಲ್ಲಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಪ್ಪ ಮುರಡಿ, ಪದಾಕಾರಿಗಳಾದ ಸುರೇಶ ಕುರ್ಡಿ, ಹನುಮಂತಪ್ಪ, ರಂಗನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net