

ಹನೂರು: ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗದಂತೆ ಪ್ರತಿಯೊಬ್ಬರೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ತಹಸೀಲ್ದಾರ್ ಕೆ.ಎನ್ ಚೈತ್ರಾ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಬುಧವಾರ ಕುಡಿಯುವ ನೀರು ಸಂಬಂಧ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು.
ಈ ಬಾರಿ ಹನೂರು ಭಾಗದಲ್ಲಿ ಸಮರ್ಪಕವಾಗಿ ಮಳೆಯಾಗದ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ಈಗಾಗಲೇ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಆದ್ದರಿಂದ ಪ್ರತಿಯೊಬ್ಬರೂ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ಜನರಿಗೆ ಕುಡಿಯುವ ನೀರು ಒದಗಿಸಬೇಕು. ತೀವ್ರ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನಿರೋದಗಿಸಬೇಕು. ಜನರು ಯಾವುದೇ ಕಾರಣಕ್ಕೂ ನೀರಿಗೆ ತೊಂದರೆ ಪಡಬಾರದು. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ಕಾರ್ಯ ಪ್ರವೃತರಾಗಬೇಕು ಎಂದು ತಿಳಿಸಿದರು.
ಎಚ್ಚರ ವಹಿಸಬೇಕು: ತಾಲೂಕು ಪಂಚಾಯಿತಿ ಇಒ ಉಮೇಶ್ ಮಾತನಾಡಿ, ಜಿಲ್ಲೆಯ ವಿವಿಧ ತಾಲೂಕಿನಲ್ಲಿ ತಕ್ಕ ಮಟ್ಟಿಗೆ ಮಳೆಯಾಗಿದೆ. ಆದರೆ ಹನೂರು ತಾಲೂಕಿನಲ್ಲಿ ಮಳೆಯಾಗಿಲ್ಲ. ಮಾಹಿತಿ ಪ್ರಕಾರ ಈ ವರ್ಷ ಹನೂರಿಗೆ ಶೇ.30ರಷ್ಟು ಮಾತ್ರವಷ್ಟೇ ಮಳೆಯಾಗಲಿದೆ ಎಂಬುದು ತಿಳಿದು ಬಂದಿದೆ. ಹಾಗಾಗಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೂರಲಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಎಚ್ಚರ ವಹಿಸಬೇಕು. 15ನೇ ಹಣಕಾಸಿನ ಅನುದಾನ ಹಾಗೂ ತೆರಿಗೆ ಹಣವನ್ನು ಬಳಸಿಕೊಂಡು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಜತೆಗೆ ಮುಂದಿನ ದಿನಗಳಲ್ಲಿ ತಾಲೂಕಿನ ವಡ್ಡರದೊಡ್ಡಿ, ಅರ್ಧನಾರಿಪುರ, ಎಲ್ಲೇಮಾಳ, ಸೇಬಿನಕೋಬೆ, ಜೋರೆದೊಡ್ಡಿ, ತೊಮಿಯಾರ್‌ಪಾಳ್ಯ, ಜಲ್ಲಿಪಾಳ್ಯ ಸೇರಿದಂತೆ ನೀರಿನ ಸಮಸ್ಯೆ ತಲೆದೂರುವ ಮುನ್ಸೂಚನೆ ಇರುವ ಇನ್ನಿತರ ಗ್ರಾಮಗಳ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮವಹಿಸಬೇಕು. ಪ್ರತಿನಿತ್ಯ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಬಗ್ಗೆ ಪರಿಶೀಲಿಸಬೇಕು. ಇನ್ನು ಗುಳ್ಯದ ಬಯಲು, ಬಿದರಳ್ಳಿ, ಕಡಬೂರು, ಗೋಡೆಸ್ಟ್‌ನಗರ, ಎಂ. ಟಿ ದೊಡ್ಡಿ ಹಾಗೂ ಕಾರ್ಗೆರೆ ದೊಡ್ಡಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತಿರುವುದರ ಬಗ್ಗೆ ಜಿಪಿಎಸ್ ಫೋಟೋದೊಂದಿಗೆ ವರದಿ ನೀಡಬೇಕು ಎಂದು ಸೂಚಿಸಿದರು.
ಇದೇ ವೇಳೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಕೆಲ ಅಗತ್ಯ ಸೂಚನೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಎಇಇ ಸುಧಾನ್ವನಾಗ್, ಎಇ ಪೂರ್ಣಿಮಾ, ಪಿಡಿಒಗಳಾದ ನಂಜುಂಡಸ್ವಾಮಿ, ಸುರೇಶ್, ಮಾದೇಶ್, ಕಿರಣ್, ಮಹದೇವಪ್ರಭು ಹಾಗೂ ಇನ್ನಿತರರು ಇದ್ದರು.