

ಸಕಲೇಶಪುರ: ಮಲೆನಾಡಿನಲ್ಲೂ ಬರದ ವಾತಾವರಣ ಮೂಡಿದ್ದು, ಯಾವುದೇ ಕಾರಣಕ್ಕೂ ಜನರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕ ಸಿಮೆಂಟ್ ಮಂಜು ಸೂಚಿಸಿದರು.
ತಾಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ ಶುಕ್ರವಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ನೀಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಸಾಕಾರಗೊಳ್ಳುತಿದೆ. ಸುಮಾರು 90 ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರದ 331 ಗ್ರಾಮಗಳಿಗೆ ಕೇಂದ್ರ ಸರ್ಕಾರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಗೊರೂರು ಹೇಮಾವತಿ ಜಲಾಶಯದಿಂದ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಈ ಯೋಜನೆಯಿಂದ ಸಕಲೇಶಪುರ ತಾಲೂಕಿನ ಸುಮಾರು 24,508 ಕುಟುಂಬಗಳಿಗೆ ನಳಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಕಾಮಗಾರಿಯನ್ನು 2025ರ ವಷಾರ್ಂತ್ಯಕ್ಕೆ ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ವಿವರಿಸಿದರು.
ಹಾಲಿ ಜಲಜೀವನ್ ಮಿಷನ್ ಯೋಜನೆಯಡಿ ತಾಲೂಕಿನ ಪ್ರತಿ ಗ್ರಾಮ ಪ್ರತಿ ಕುಟುಂಬಗಳಿಗೆ ಕುಡಿಯುವ ನೀರು ಒದಗಿಸಲು ಕಾಮಗಾರಿ ಕೈಗೊಂಡಿದ್ದು, ಸುಮಾರು 300 ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತಿದೆ. ಸದರಿ ಟ್ಯಾಂಕ್‌ಗಳಿಗೆ ಈ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಗಳಿಂದ ನೀರಿನ ಸಂಪರ್ಕ ನೀಡಲಾಗುವುದು. ಸದರಿ ಬೃಹತ್ ಕಾಮಗಾರಿಯ ಟೆಂಡರ್ ಆಗಿದೆ. ಇದೊಂದು ಜಿಲ್ಲೆಯ ಬೃಹತ್ ನೀರಾವರಿ ಯೋಜನೆಯಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್ ಆಶಾಲತಾ ಮಾತನಾಡಿದರು. ಬಾಳ್ಳುಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಕ್ಯಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ವಸಂತ್ ಕುಮಾರ್, ಬೆಳಗೋಡು ಗ್ರಾಮಪಂಚಾಯಿತಿ ಅಧ್ಯಕ್ಷೆ ಧರಣಿ, ಬಾಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಗೋಪಿನಾಥ್, ಯಸಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನು ಪರಮೇಶ್ ಸೇರಿದಂತೆ ಇತರ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಇದ್ದರು.