ಕುಸ್ತಿ ಕ್ರೀಡೆ ಉಳಿಸಿ ಬೆಳೆಸಲು ಮುಂದಾಗಿ

Take steps to preserve and develop the sport of wrestling
ವಿಜಯಪುರ ಹೊರ ವಲಯದ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಯನ್ನು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಉದ್ಘಾಟಿಸಿದರು. ಹಾಸಿಂಪೀರ ವಾಲಿಕಾರ, ಅಶೋಕ ಬಗಲಿ, ಈರಣ್ಣ ಪಟ್ಟಣಟ್ಟಿ ಇತರರಿದ್ದರು.
Published on

ವಿಜಯಪುರ: ಡಿಜಿಟಲ್ ಆಟಗಳಿಂದಾಗಿ ಸದ್ಯದ ಯುವಜನತೆ ದೇಶೀಯ ಆಟ ಕುಸ್ತಿ ಪಂದ್ಯಕ್ಕೆ ನಿರಾಸಕ್ತಿ ಹೊಂದುತ್ತಿದಾರೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದ ದ್ಯಾಮಗಂಗಾ ಹಾಗೂ ಮಾರುತೇಶ್ವರ ಜಾತ್ರೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಜಾತ್ರೆ, ಉತ್ಸವಗಳಲ್ಲಿ ಹಮ್ಮಿಕೊಳ್ಳುವ ಕುಸ್ತಿ ಪಂದ್ಯಾವಳಿಗೆ ಪ್ರಾಚೀನ ಕಾಲದ ಐತಿಹ್ಯವಿದೆ. ಮೈಸೂರು ದಸರಾ ಸೇರಿ ದೇಶದ ವಿವಿಧ ಭಾಗಗಳಲ್ಲಿ ಹಮ್ಮಿಕೊಳ್ಳುವ ಕುಸ್ತಿ ಪಂದ್ಯಕ್ಕೆ ಕುಸ್ತಿ ಪಟುಗಳು ಭಾಗವಹಿಸುವ ಮೂಲಕ ಗ್ರಾಮೀಣ ಪ್ರದೇಶದ ಕಲೆ ಉಳಿಸುತ್ತಿದ್ದಾರೆ ಎಂದರು.

ಸದ್ಯ ಕುಸ್ತಿ ಪಟುಗಳಿಗೆ ಸೂಕ್ತ ತರಬೇತಿ ಸಿಗುತ್ತಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿನ ಜನರು ಕುಸ್ತಿ ಪಂದ್ಯಗಳ ಬಗ್ಗೆ ನಿರಾಸಕ್ತಿ ಹೊಂದುತ್ತಿರುವುದು ಅತ್ಯಂತ ನೋವಿನ ವಿಚಾರ. ಹೀಗಾಗಿ ಗರಡಿ ಮನೆಗಳೆಲ್ಲವೂ ಮರೆಯಾಗುತ್ತಿವೆ ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಸ್ತಿ ಜನಪ್ರಿಯ ದೇಶಿ ಕ್ರೀಡೆ. ನಶಿಸಿ ಹೋಗುತ್ತಿರುವ ಕುಸ್ತಿ ಪಂದ್ಯಗಳನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು.

ವಿವಿಧ ಭಾಗದ ಐವತ್ತು ಜೋಡಿಗಳು ಕುಸ್ತಿಯಲ್ಲಿ ಭಾಗವಹಿಸಿದ್ದರು. ಮುಖಂಡರಾದ ಅಶೋಕ ಬಗಲಿ, ಈರಣ್ಣ ಪಟ್ಟಣಟ್ಟಿ, ಸಾಹೇಬಗೌಡ ಬಿರಾದಾರ, ಮುದಸ್ಸರ ವಾಲಿಕಾರ, ಮಹಾಂತೇಶ ಶಿರಭೂರ, ಭೀಮನಗೌಡ ಬಿರಾದಾರ, ಜಗನ್ನಾಥ ಶಿರಬೂರ, ಮಲ್ಲಪ್ಪ ಭಾವಿಕಟ್ಟಿ, ರೇವಣಸಿದ್ಧೇಶ್ವರ ಗೋಣಸಗಿ, ರಾಮಗೊಂಡ ಬೀಳೂರ, ಜಗನ್ನಾಥ ಶಿರಬೂರ, ಪ್ರಕಾಶ ಚಿಕ್ಕಲಕಿ, ಮಲ್ಲಿಕಾರ್ಜುನ ಕಂಬಾರ, ಮುದಕಪ್ಪ ಪಡನಾಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net