

ಮದ್ದೂರು: ಪಟ್ಟಣದ ಚನ್ನೇಗೌಡ ಬಡಾವಣೆಯಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಿಂದ ಅಪೂರ್ಣಗೊಂಡಿರುವ 240 ಮನೆಗಳನ್ನು ಪೂರ್ಣಗೊಳಿಸಬೇಕು ಮತ್ತು ರಾಂ ರಹೀಮ್ ನಗರದಲ್ಲಿ ಹುಡ್ಕೋ ಯೋಜನೆಯಡಿ ನಿರ್ಮಾಣಗೊಂಡಿರುವ ಮನೆ ಮಾಲೀಕರಿಗೆ ಹಕ್ಕುಪತ್ರ ನೀಡಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಎಂ.ಉದಯ್ ತಾಕೀತು ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪುರಸಭೆ ವ್ಯಾಪ್ತಿಗೆ ಸಂಬಂಧಪಟ್ಟ ಸ್ಲಂಬೋರ್ಡ್ ಅಧಿಕಾರಿಗಳು, ರಾಜೀವ್ ಗಾಂಧಿ ವಸತಿ ಯೋಜನೆಯ ನಿಗಮದ ಅಧಿಕಾರಿಗಳು, ಪುರಸಭೆ ಅಧಿಕಾರಿಗಳೊಂದಿಗೆ ಪಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ಅರ್ಪೂರ್ಣಗೊಂಡಿರುವ ಮನೆಗಳ ನಿರ್ಮಾಣ ಹಾಗೂ ಮೂಲ ಸೌಕರ್ಯಗಳ ಕಲ್ಪಿಸುವ ಸಂಬಂಧ ಹಮ್ಮಿಕೊಂಡಿದ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುಮಾರು 20 ವರ್ಷಗಳಿಂದ ಮನೆಗಳು ಪೂರ್ಣಗೊಂಡಿಲ್ಲ ಹಾಗೂ ಪೂರ್ಣಗೊಂಡ ಮನೆಗಳಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಿಲ್ಲ. ಈ ರೀತಿಯಾದರೆ ಅಲ್ಲಿಯ ನಿವಾಸಿಗಳು ನೆಮ್ಮದಿಯಾಗಿ ಜೀವನ ನಡೆಸುವುದು ಹೇಗೆ?. ಇದರಿಂದ ಹಲವಾರು ಸಮಸ್ಯೆಗಳನ್ನು ಇಲ್ಲಿಯ ನಿವಾಸಿಗಳು ಅನುಭವಿಸುವಂತಾಗಿದೆ. ಆದ್ದರಿಂದ ಈ ಕೂಡಲೇ ಈ ಸಂಬಂಧ ಅಗತ್ಯ ಕ್ರಮ ಕೈಗೊಂಡು ನಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸ್ಲಂ ಬೋರ್ಡ್ ಅಧೀಕ್ಷಕ ಇಂಜಿನಿಯರ್ ಹರೀಶ್ ಮಾತನಾಡಿ, ಅಪೂರ್ಣಗೊಂಡಿರುವ ಮನೆಗಳ ನಿರ್ಮಾಣ ಕಾರ್ಯವನ್ನು ಮುಂದುವರಿಸಿ 2 ತಿಂಗಳಲ್ಲಿ ಮನೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ರಾಂ ರಹೀಮ್ ನಗರದಲ್ಲಿ ನಿರ್ಮಾಣಗೊಂಡಿರುವ ಮನೆಗಳಿಗೆ ಹಕ್ಕುಪತ್ರ ವಿತರಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳ ಜತೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಮನೆ ನಿರ್ಮಾಣ ಕಾಮಗಾರಿ ಶೀಘ್ರವಾಗಿ ಪ್ರಾರಂಭಿಸಬೇಕು ಮತ್ತು ಉತ್ತಮ ಗುಣಮಟ್ಟದಿಂದ ನಿರ್ಮಾಣ ಮಾಡಿ ಆರ್ಥಿಕವಾಗಿ ಹಿಂದುಳಿದ ನಿವಾಸಿಗಳಿಗೆ ಅನುಕೂಲ ಕಲಿಸಬೇಕು ಮತ್ತು ಅರ್ಹ ಫಲಾನುಭವಿಗಳಿಗೆ ಈ ಯೋಜನೆ ತಲುಪಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ, ತಾಪಂ ಇಒ ಸಂದೀಪ್, ಸ್ಲಂ ಬೋರ್ಡ್ ಎಇಇ ದರ್ಶನ್, ಎಇ ಕಾವ್ಯಶ್ರೀ, ರಾಜೀವ್‌ಗಾಂಧಿ ವಸತಿ ನಿಗಮದ ಸಹಾಯ ಪ್ರಧಾನ ವ್ಯವಸ್ಥಾಪಕ ಹುಷ್ಮಾನ್‌ಪಾಷ, ತಾಪಂ ನೋಡಲ್ ಅಧಿಕಾರಿ ಕುಮಾರ್, ಪುರಸಭಾ ಸದಸ್ಯರಾದ ಕೋಕಿಲಾ ಅರುಣ್, ಸರ್ವಮಂಗಳಾ ಶಿವನಂಜಯ್ಯ, ಸಚಿನ್, ಸಿದ್ದರಾಜು, ಕಮಲ್, ಆದಿಲ್, ಪುರಸಭಾ ಮಾಜಿ ಅಧ್ಯಕ್ಷರಾದ ಎಂ.ಸಿ.ಬಸವರಾಜು, ಇಂತಿಯಾಜ್, ಶೇಖರ್, ಮುಖಂಡರಾದ ಎಂ.ಪಿ.ಮೃತ್ಯುಂಜಯ, ಆನಂದ್, ಶಿವಣ್ಣ ಸೇರಿದಂತೆ ಇತರರು ಇದ್ದರು.