

ಸೋಮವಾರಪೇಟೆ: ದೇಶದ ಒಳಗೆ ಕಾಫಿ ಬಳಕೆ ಹೆಚ್ಚಾಗಬೇಕು. ಅಲ್ಲದೆ ಉತ್ತರ ಭಾರತದಲ್ಲೂ ಕಾಫಿ ಸೇವನೆ ಹೆಚ್ಚಿಸಲು ಸಂಬಂಧಪಟ್ಟವರು ಹೆಚ್ಚಿನ ಆಸಕ್ತಿ ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.
ತಾಲೂಕು ಕಾಫಿ ಬೆಳೆಗಾರರ ಸಂಘ ಹಾಗೂ ತಾಲೂಕು ಹೋಂ ಸ್ಟೇ ಅಸೋಸಿಯೇಷನ್ ವತಿಯಿಂದ ಪಟ್ಟಣದ ವಿವೇಕಾನಂದ ಸರ್ಕಲ್ ಬಳಿ, ಅಂತಾರಾಷ್ಟ್ರೀಯ ಕಾಫಿ ದಿನದ ಅಂಗವಾಗಿ ಕಾಫಿ ಕುಡಿಯಿರಿ, ಕಾಫಿ ಕುಡಿಸಿರಿ, ಕಾಫಿಯೊಂದಿಗೆ ದೈನಂದಿನ ಜೀವನ ಪ್ರಾರಂಭಿಸಿ ಎಂಬ ಹೆಸರಿನಲ್ಲಿ ಬುಧವಾರ ಆಯೋಜಿಸಿದ್ದ ಕಾಫಿ ಹಬ್ಬದಲ್ಲಿ ಮಾತನಾಡಿದರು.
ನಮ್ಮ ರಾಜ್ಯ, ದೇಶದಲ್ಲಿ ಕಾಫಿಯು ಶೇ.30ರಷ್ಟು ಮಾತ್ರ ಬಳಕೆಯಾಗುತ್ತಿದೆ. ಉಳಿದ ಶೇ.70ರಷ್ಟು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಹೋಗುತ್ತಿದೆ. ಉತ್ತರ ಭಾರತದಲ್ಲಿ ಟೀ ಹೆಚ್ಚಾಗಿ ಬಳಕೆಯಾಗುತ್ತಿದೆ. ಕಾಫಿಯನ್ನು ಕುಡಿಯುವವರ ಸಂಖ್ಯೆ ಹೆಚ್ಚಿಸಬೇಕಾಗಿದೆ ಎಂದರು.
ಹವಾಮಾನ ವೈಪರೀತ್ಯ, ಕಾರ್ಮಿಕರ ಸಮಸ್ಯೆ, ಕಾನೂನಿನ ಚೌಕಟ್ಟು, ಮಾರುಕಟ್ಟೆ ಸಮಸ್ಯೆಗಳ ನಡುವೆಯೂ ಬೆಳೆಗಾರರು ಕಾಫಿ ಗಿಡ, ತೋಟ, ಮಣ್ಣನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಈ ಶ್ರಮಕ್ಕೆ ನಾವೆಲ್ಲರೂ ಚಿರಋಣಿಯಾಗಿರಬೇಕು ಎಂದರು.
ಕಾಫಿ ಬೆಳೆಗಾರ ಜಿ.ಎಸ್.ಪ್ರಭುದೇವ್ ಮಾತನಾಡಿ, ಗುಣಮಟ್ಟದ ಕಾಫಿ ಉತ್ಪಾದನೆಗೆ ಬೆಳೆಗಾರರು ಮುಂದಾಗಬೇಕು ಎಂದು ಸಲಹೆ ನೀಡಿದರು.
ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಮಾತನಾಡಿ, ನೆರೆಯ ಸಕಲೇಶಪುರ ತಾಲೂಕಿನಲ್ಲಿ ಬೆಳೆಗಾರರ ಸಂಘವು ಸ್ವಂತ ಕಟ್ಟಡ ಹೊಂದಿದ್ದು, ಸಂಘಟನೆ ಬಲಿಷ್ಠವಾಗಿದೆ. ಸಂಘಟನೆಯಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಬೆಳೆಗಾರರಿಗೆ ಮಾಹಿತಿ ಒದಗಿಸಲಾಗುತ್ತಿದೆ. ಸೋಮವಾರಪೇಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರಿದ್ದು, ಸ್ವಂತ ಕಟ್ಟಡ ಹೊಂದಿಕೊಂಡರೆ ಚರ್ಚೆ, ಸಂವಾದ, ಜಾಗೃತಿ ಕಾರ್ಯಾಗಾರಗಳನ್ನು ನಡೆಸಲು ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ. ಲವ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಕಾಫಿ ಬೆಳೆಗಾರರಾದ ಹಾನಗಲ್ಲು ಗ್ರಾಮದ ಬಿ.ಎಸ್.ಸೀತಾರಾಂ, ಸುಳಿಮಳ್ತೆ ಗ್ರಾಮದ ಎಸ್.ಎಲ್.ಪುಟ್ಟರಾಜು, ಕಿರಗಂದೂರು ಗ್ರಾಮದ ವಿಮಲಾ ಕೃಷ್ಣಕಾಂತ್, ಕರ್ಕಳ್ಳಿ ಗ್ರಾಮದ ನಿರ್ಮಲಾ ಪ್ರಕಾಶ್, ತಣ್ಣೀರುಹಳ್ಳ ಗ್ರಾಮದ ರಾಣಿ ನರೇಂದ್ರ ಇದ್ದರು.
ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಾದ ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ, ಹಿರಿಯ ಕಾಫಿ ಬೆಳೆಗಾರ ಎ.ಆರ್. ಮುತ್ತಣ್ಣ ಅವರನ್ನು ಸನ್ಮಾನಿಸಲಾಯಿತು.
ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ. ರೋಹಿತ್, ಸಂಘದ ಉಪಾಧ್ಯಕ್ಷ ಗೌಡಳ್ಳಿ ಪ್ರಸಿ, ಕೆ.ಜಿ.ಎಫ್. ನಿರ್ದೇಶಕ ಸಿ.ಕೆ.ಮಲ್ಲಪ್ಪ, ಸಂಘದ ಕಾರ್ಯದರ್ಶಿ ಯಡೂರು ಮನೋಹರ್, ನಿರ್ದೇಶಕ ಎಸ್.ಎಂ. ಕೃಷ್ಣ, ತಿಲೋತ್ತಮೆ, ಆಶಾ ಯೋಗೇಂದ್ರ ಇದ್ದರು.