

ಸರಗೂರು: ಸರ್ಕಾರದ ಸೌಲಭ್ಯ ಪಡೆಯಲು ಗ್ರಾಮಗಳನ್ನು ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಸಲು ಶೀಘ್ರದಲ್ಲೇ ಕ್ರಮವಹಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಯ್ಯಂಬಳ್ಳಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮೀಣ ಜನತೆ, ರೈತರ ಸಮಸ್ಯೆ ಬಗೆಹರಿಸಲು ವಾರಕೊಮ್ಮೆ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕು. ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಸಲು ಜೂ.10ರೊಳಗೆ ಸರ್ವೇ ಕಾರ್ಯ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಇಲಾಖೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಆಡಳಿತ ನಡೆಸಿದರೆ ಸಾಲದು. ಬದಲಿಗೆ ತಮ್ಮ ಇಲಾಖೆಯಲ್ಲಿನ ಸರ್ಕಾರದ ಸೌಲಭ್ಯಗಳ ಬಗ್ಗೆ ಗ್ರಾಮಗಳಿಗೆ ಭೇಟಿ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಜನರು ಯಾವುದೇ ಸಮಸ್ಯೆಗಳಿದ್ದರೆ ನೇರವಾಗಿ ನನ್ನ ಗಮನಕ್ಕೆ ತರಬೇಕು. ಅವುಗಳ ಪರಿಹಾರಕ್ಕೆ ತ್ವರಿತ ಕ್ರಮ ವಹಿಸಲಾಗುವುದು. 7 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸಿ ಕ್ಷೇತ್ರವನ್ನು ಮಾದರಿಯಾಗಿ ಮಾಡುತ್ತೇನೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಪಿ.ರವಿ ಮಾತನಾಡಿ, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಸ್ಪಂದಿಸುವ ಕೆಲಸ ಮಾಡಬೇಕು. ಅದು ಬಿಟ್ಟು ಸುಮ್ಮನೆ ಕಾಲಹರಣ ಮಾಡಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರು, ಸಾಮಾನ್ಯ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದಾರೆ. ಅವುಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ತಹಸೀಲ್ದಾರ್ ಮೋಹನಕುಮಾರಿ, ತಾಪಂ ಇಒ ಪ್ರೇಮ್‌ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ಅಬಕಾರಿ ಇಲಾಖೆಯ ಇನ್‌ಸ್ಪೆಕ್ಟರ್ ಶಿವರಾಜು, ಕೃಷಿ ಇಲಾಖೆ ಜಯರಾಮಯ್ಯ, ಪಂಚಾಯಿತಿ ಪಿಡಿಒ ಪರಮೇಶ್, ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಜಾಣನಾಯಕ, ಉಪಾಧ್ಯಕ್ಷ ವಿಜಯಕುಮಾರ್, ಸದಸ್ಯರಾದ ಶಿವಣ್ಣ, ಪುಟ್ಟಮ್ಮ, ರಾಣಿ ತಿಮ್ಮಪ್ಪ, ಕಾರ್ಯದರ್ಶಿ ನರಸಿಂಹಮೂರ್ತಿ, ಕಾಂಗ್ರೆಸ್ ಮುಖಂಡರಾದ ಮಾದಪ್ಪ, ಚಲುವರಾಜು, ಸರ್ಕಲ್ ಇನ್‌ಸ್ಪೆಕ್ಟರ್ ಪ್ರಸನ್ನಕುಮಾರ್, ಸಮಾಜ ಕಲ್ಯಾಣ ಇಲಾಖೆ, ರಾಮಸ್ವಾಮಿ, ಕಂದೇಗಾಲ ಶಿವರಾಜು, ನಾಗರಾಜು ಇನ್ನೂ ಇಲಾಖಾ ಅಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.
ಗ್ರಾಮಗಳ ಮುಖಂಡರಿಂದ ಸಮಸ್ಯೆಗಳ ಸುರಿಮಳೆ: ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇ ಸ್ವತ್ತು, ಶೌಚಗೃಹ, ಕೊಟ್ಟಿಗೆ ಸೇರಿ ಇನ್ನಿತರ ದಾಖಲೆ ಪಡೆಯಲು ಹೋದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರಿಂದ ಬೇಸತ್ತು ಪಂಚಾಯಿತಿ ಕಡೆಗೆ ಹೋಗುವುದನ್ನು ಬಿಟ್ಟಿದ್ದೇವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಜತೆಗೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಗ್ರಾಮಸ್ಥರು ಶಾಸಕ ಅನಿಲ್ ಚಿಕ್ಕಮಾದು ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಸಭೆಗೆ ಡಿಪೋ ಮ್ಯಾನೇಜರ್ ಬಂದಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಧಿಕಾರಿಗಳು ಕರೆ ಸ್ವೀಕರಿಸಿ: ನೂತನ ತಾಲೂಕು ಸರಗೂರಿನ ಉಯ್ಯಂಬಳ್ಳಿ ಗ್ರಾಮದಲ್ಲಿ ದನ-ಕರುಗಳಿಗೆ ರೋಗ ಕಾಣಿಸಿಕೊಂಡಾಗ ಸರಿಯಾಗಿ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಪಶು ವೈದ್ಯರಿಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಎಂದು ಉಯ್ಯಂಬಳ್ಳಿ ಗ್ರಾಮಸ್ಥರು ದೂರಿದರು. ಇದಕ್ಕೆ ಅಧಿಕಾರಿಗಳ ವಿರುದ್ಧ ಗರಂ ಆದ ಶಾಸಕ ಅನಿಲ್ ಚಿಕ್ಕಮಾದು ಮೊದಲು ಜನರ ಕರೆ ಸ್ವೀಕರಿಸುವುದನ್ನು ಕಲಿಯಿರಿ. ಆ ಮೇಲೆ ಕೆಲಸ ಮಾಡಿ ಎಂದು ಎಚ್ಚರಿಕೆ ನೀಡಿದರು.