ಮೇ 10ರೊಳಗೆ ಸಂಬಳ ಪ್ಯಾಕೇಜ್​ ಖಾತೆ ಹೊಂದಲು ಕ್ರಮವಹಿಸಿ

Divy prabhu
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಜ್ಯ ಸರ್ಕಾರಿ ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಸಲು ವಿವಿಧ ಬ್ಯಾಂಕ್​ಗಳಲ್ಲಿ ಒದಗಿಸುವ ಸಂಬಳ ಪ್ಯಾಕೇಜ್​ಗಳ ಅಡಿ ಖಾತೆಗಳನ್ನು ತೆರೆಯುವುದು ಮತ್ತು ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲ ಅಧಿಕಾರಿ, ನೌಕರರಿಗೆ ಕಡ್ಡಾಯಗೊಳಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಅವರು, ಜಿಲ್ಲೆಯ ಪ್ರತಿ ಸರ್ಕಾರಿ ನೌಕರ ಸಂಬಳ ಪ್ಯಾಕೇಜ್​ ಖಾತೆ ಪ್ರಯೋಜನ ಪಡೆಯಬೇಕು. ಹೀಗಾಗಿ ಜಿಲ್ಲೆಯ ಎಲ್ಲ ಇಲಾಖೆಗಳ ಮುಖ್ಯಸ್ಥರು ತಮ್ಮ ಇಲಾಖೆಯ ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲಿರುವ ಡಿಡಿಒಗಳ ಮೂಲಕ ಪ್ರತಿ ನೌಕರನ ವೇತನ ಪಾವತಿ ಖಾತೆ ಸಂಬಳ ಪ್ಯಾಕೇಜ್​ ಖಾತೆ ಆಗಿರುವದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಸಂಬಳ ವೇತನ ಖಾತೆ ಆಗಿರದಿದ್ದಲ್ಲಿ ಮುತುವರ್ಜಿ, ಜವಾಬ್ದಾರಿ ವಹಿಸಿ ಮಾಡಿಸಬೇಕು ಎಂದು ನಿರ್ದೇಶಿಸಿದ್ದಾರೆ.

ನೌಕರನಿಗೆ ಸಂಬಳ ಪ್ಯಾಕೇಜ್​ ಖಾತೆ ಮತ್ತು ಪಿಎಂಜೆಜೆಬಿವೈ ಹಾಗೂ ಪಿಎಂಎಸ್​ಬಿವೈ ವಿಮೆ ಮಾಡಿಸಿರುವ ಬಗ್ಗೆ ಜ್ಞಾಪನಾ ಪತ್ರದೊಂದಿಗೆ ಕಳುಹಿಸಿರುವ ನಿಗದಿತ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ ಇಲಾಖೆಯ ಜಿಲ್ಲಾ ಮುಖ್ಯಸ್ಥರ ಮೂಲಕ ಮೇ 10ರೊಳಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಎನ್​ಐಸಿ ಕಚೇರಿಯಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಯೋಜನೆಯ ನೊಡಲ್​ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net